ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ದಾಖಲೆಯ 17ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಇಂದಿನಿಂದ ಮಾರ್ಚ್ 27ರವರೆಗೆ ಕರ್ನಾಟಕ ಬಜೆಟ್ ಅಧಿವೇಶನ ನಡೆಯಲಿದೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದಲ್ಲಿ 17ನೇ ಐತಿಹಾಸಿಕ ರಾಜ್ಯ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿಯ ಸಿಎಂ ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ.
ರಾಜ್ಯದ ಸಮಗ್ರ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುವ ನಿರೀಕ್ಷೆ ಇದೆ. ವೈದ್ಯಕೀಯ ಕಾಲೇಜು ಇಲ್ಲದ ಜಿಲ್ಲೆಗಳಿಗೆ ಹೊಸ ಕಾಲೇಜುಗಳ ಘೋಷಣೆ ಸಾಧ್ಯತೆ ದಟ್ಟವಾಗಿದೆ. ಬೆಳಗಾವಿ-ಹುಬ್ಬಳ್ಳಿ ರೈಲು ಮಾರ್ಗ, ಕೈಗಾರಿಕಾ ಆಧುನೀಕರಣ, ಪ್ರವಾಸೋದ್ಯಮಕ್ಕೆ ಪಿಪಿಪಿ ಮಾದರಿಯಲ್ಲಿ ಮೂಲಸೌಕರ್ಯ, ಪ್ರಗತಿಯಲ್ಲಿರುವ ನೀರಾವರಿ ಯೋಜನೆಗಳಿಗೆ ವಿಶೇಷ ಅನುದಾನ ನಿರೀಕ್ಷೆ ಇದೆ.
ಬಜೆಟ್ ನಲ್ಲಿ ಲಕ್ಕುಂಡಿ ಅಭಿವೃದ್ಧಿಗೆ 100ಕೋಟಿ ರೂ. ನೀಡುವ ನಿರೀಕ್ಷೆ ಇದೆ. ಇತ್ತೀಚೆಗಷ್ಟೇ ಲಕ್ಕುಂಡಿಯಲ್ಲಿ ನಿಧಿ ಸಿಕ್ಕಿತ್ತು. ಲಕ್ಕುಂಡಿ ಗ್ರಾಮ ಸ್ಥಳಾಂತರಕ್ಕೆ ಗ್ರಾಮಸ್ಥರೇ ಸಜ್ಜಾಗಿದ್ದಾರೆ.
ಬೆಂಗಳೂರಿನ ಅಭಿವೃದ್ಧಿಗೆ ಮತ್ತಷ್ಟು ಅನುದಾನ ಮೀಸಲಿಡಬಹುದು, ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಬಹುದು, ಮೆಟ್ರೋ ವಿಸ್ತರಣೆ, ಡಬಲ್ ಡೆಕ್ಕರ್ ಮಾರ್ಗ, ಐಟಿ ಕಾರಿಡಾರ್ ಸ್ಥಾಪನೆಗೆ ಹಣ ಮೀಸಲಿಡಬಹುದು, ಕೈಗೆಟುಕುವ ದರದಲ್ಲಿ ವಸತಿ, ಶುದ್ಧ ಕುಡಿಯುವ ನೀರು ಮತ್ತು ನಿರಂತರ ವಿದ್ಯುತ್ ಪೂರೈಕೆಯಂತಹ ಪ್ರಮುಖ ಬೇಡಿಕೆ ಈಡೇರಿಸುವ ನಿರೀಕ್ಷೆ. ವಿದ್ಯುತ್ ತೆರಿಗೆ ಇಳಿಕೆ, ಆಸ್ತಿ ತೆರಿಗೆ ರಿಯಾಯಿತಿ ನೀಡುವ ನಿರೀಕ್ಷೆ ಇದೆ.
2023-24ರಲ್ಲಿ ತೆರುಗೆ ಆದಾಯ ಬೆಳವಣಿಗೆ ಬಹುತೇಕ ಸ್ಥಗಿತಗೊಂಡಂತಾಗಿದ್ದರೂ, 2024-25 ಮತ್ತು 2025-26ರಲ್ಲಿ ಮತ್ತೆ ವೇಗ ಪಡೆದಿದೆ. 2025-26ರಲ್ಲಿ ತೆರಿಗೆ ಆದಾಯವು 2 ಲಕ್ಷ ಕೋಟಿ ರೂ.ಗೂ ಅಧಿಕವಾಗುವ ನಿರೀಕ್ಷೆ ವ್ಯಕ್ತವಾಗಿದೆ.
ಈ ಬಾರಿಯ ಬಜೆಟ್ನಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗೆ ಆದ್ಯತೆ ನೀಡುವುದರ ಜೊತೆಗೆ, ರಾಜ್ಯದ ಆರ್ಥಿಕ ಹೊರೆಯನ್ನು ತಗ್ಗಿಸಲು ಯೋಜನೆಗಳಲ್ಲಿ ಬದಲಾವಣೆಗಳನ್ನು ತರಲಾಗುತ್ತದೆ ಎನ್ನಲಾಗಿದೆ. ಮೂಲಸೌಕರ್ಯ, ಶಿಕ್ಷಣ, ಕೃಷಿ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಬಜೆಟ್ನಲ್ಲಿ ಹೆಚ್ಚಿನ ಒತ್ತು ನೀಡುವ ಸಾಧ್ಯತೆ ಇದೆ.
ಈ ವರ್ಷದ ರಾಜ್ಯ ಬಜೆಟ್ ಗಾತ್ರ ಸುಮಾರು 4.50 ಲಕ್ಷ ಕೋಟಿ ರೂ. ತಲುಪುವ ಸಾಧ್ಯತೆ ಇದೆ ಎಂದು ಹಣಕಾಸು ಇಲಾಖೆಯ ಅಂದಾಜುಗಳು ಸೂಚಿಸುತ್ತವೆ. ಒಟ್ಟಾರೆ ಹೀಗಾಗಿ, ಸಿಎಂ ಸಿದ್ದರಾಮಯ್ಯ ಮಂಡಿಸಲಿರುವ ಈ ಬಾರಿಯ ಬಜೆಟ್ನತ್ತ ರಾಜ್ಯದ ಜನರ ಚಿತ್ತ ನೆಟ್ಟಿದೆ.

