HomeKarnatakaಪಿಂಚಣಿ ಯೋಜನೆ ಫಲಾನುಭವಿಗಳ ವಾರ್ಷಿಕ ಆದಾಯ ಮಿತಿ ಹೆಚ್ಚಿಸಿ ಕಂದಾಯ ಇಲಾಖೆ ಆದೇಶ

ಪಿಂಚಣಿ ಯೋಜನೆ ಫಲಾನುಭವಿಗಳ ವಾರ್ಷಿಕ ಆದಾಯ ಮಿತಿ ಹೆಚ್ಚಿಸಿ ಕಂದಾಯ ಇಲಾಖೆ ಆದೇಶ

ಸಂಧ್ಯಾಸುರಕ್ಷಾ, ವಿಧವಾ ವೇತನ ಮತ್ತು ಇತರೆ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಲ್ಲಿನ ಫಲಾನುಭವಿಗಳ ವಾರ್ಷಿಕ ಆದಾಯ ಮಿತಿಯನ್ನು ₹32,000 ರಿಂದ ₹1,20,000ಕ್ಕೆ ಹೆಚ್ಚಿಸಿ ಕಂದಾಯ ಇಲಾಖೆಯು ಆದೇಶ ಹೊರಡಿಸಿದೆ.

ಸರ್ಕಾರ ನಿಗಧಿಪಡಿಸಿದ ವಾರ್ಷಿಕ ಆದಾಯಮಿತಿ ₹32,000ಕ್ಕಿಂತ ಹೆಚ್ಚಿದ್ದ ಕಾರಣ ಈ ಹಿಂದೆ ಸೌಲಭ್ಯ ಪಡೆಯುತ್ತಿದ್ದ ಪಿಂಚಣಿದಾರರಿಗೆ ಸ್ಥಗಿತಗೊಳಿಸಲಾಗಿದ್ದ ಪಿಂಚಣಿಯನ್ನು ಅರ್ಹ ಫಲಾನುಭವಿಗಳಿಗೆ ಮುಂದುವರಿಸಲಾಗುವುದು. ಪಿಂಚಣಿದಾರರು ಆತಂಕಕ್ಕೆ ಒಳಗಾಗದಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ತಿಳಿಸಿದ್ದಾರೆ.

ಈ ಆದೇಶಕ್ಕೆ ಮೊದಲು ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳ ವಾರ್ಷಿಕ ಆದಾಯ ಮಿತಿಯನ್ನು ₹32,000 ಗಳಿಗೆ ನಿಗಧಿಪಡಿಸಲಾಗಿತ್ತು. ಆದಾಯ ಮಿತಿ ಹೆಚ್ಚಿಸುವ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರದ ಹಂತದಲ್ಲಿ ಸುದೀರ್ಘ ಚರ್ಚೆ ನಡೆದು ಹಾಗೂ ಸಂದೇಹಾಸ್ಪದವಾಗಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಭೌತಿಕ ಪರಿಶೀಲನೆ ನಡೆಸಿ, ಅರ್ಹ ಫಲಾನುಭವಿಗಳಿಗೆ ಪಿಂಚಣಿಯನ್ನು ಮುಂದುವರೆಸಲು ಮತ್ತು ಅನರ್ಹರನ್ನು ಪಟ್ಟಿಯಿಂದ ಕೈಬಿಡಲು ಸರ್ಕಾರವು ನೂತನವಾಗಿ ಹೊರಡಿಸಿರುವ ಆದೇಶದಲ್ಲಿ ಪಿಂಚಣಿ ಫಲಾನುಭವಿಗಳ ವಾರ್ಷಿಕ ಆದಾಯ ಮಿತಿಯನ್ನು ₹1,20,000ಗಳಿಗೆ ಹೆಚ್ಚಿಸಿದೆ. ಇದರಿಂದಾಗಿ ಅಸಂಖ್ಯಾತ ಅರ್ಹ ಫಲಾನುಭವಿಗಳಿಗೆ ಪಿಂಚಣಿ ಸೌಲಭ್ಯ ಎಂದಿನಂತೆ ದೊರೆಯಲಿದೆ ಎಂದವರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗ್ರಾಮ ಆಡಳಿತಾಧಿಕಾರಿ ಅಥವಾ ಸಂಬಂಧಪಟ್ಟ ಅಧಿಕಾರಿಗಳು ಭೌತಿಕ ಪರಿಶೀಲನೆ ನಡೆಸಿ, ಫಲಾನುಭವಿಗಳನ್ನು ‘ಅರ್ಹ’, ‘ಅನರ್ಹ’ ಮತ್ತು ‘ಮೃತಪಟ್ಟವರು’ ಎಂದು ಸ್ಪಷ್ಟವಾಗಿ ವರ್ಗೀಕರಿಸಿ ಸಿದ್ಧಪಡಿಸಿದ ನಿಖರವಾದ ವರದಿಯನ್ನು ಲಾಗ್-ಇನ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಿದ್ದಾರೆ. ಪರಿಶೀಲನೆಯಲ್ಲಿ ಅರ್ಹರೆಂದು ಕಂಡುಬಂದ ಫಲಾನುಭವಿಗಳಿಗೆ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದ್ದ ಪಿಂಚಣಿ ಹಣವನ್ನು ಬಿಡುಗಡೆ ಮಾಡಲು ತಹಶೀಲ್ದಾರ್ ಅಥವಾ ಅನುಮೋದಿತ ಅಧಿಕಾರಿಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಲಾಗಿದೆ. ಮುಂದುವರೆಯುವ ಫಲಾನುಭವಿಗಳ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ/ಅಂಚೆ ಕಚೇರಿ ಖಾತೆ ಸಮರ್ಪಕವಾಗಿ ಲಿಂಕ್ (Aadhaar Seeding) ಆಗಿರುವುದನ್ನು ಖಚಿತಪಡಿಸಿಕೊಳ್ಳುವಂತೆಯೂ ಅವರು ಸೂಚಿಸಿದ್ದಾರೆ.

ನಕಲಿ ದಾಖಲೆ, ತಪ್ಪು ಮಾಹಿತಿ ಅಥವಾ ಆದಾಯ ಮಿತಿ ಮೀರಿದ ಕಾರಣಕ್ಕಾಗಿ ಅನರ್ಹಗೊಂಡವರ ಪಿಂಚಣಿಯನ್ನು ಕಾಯಂ ಆಗಿ ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗುವುದಲ್ಲದೆ ನಿಯಮಬಾಹಿರವಾಗಿ ಪಿಂಚಣಿ ಪಡೆದಿರುವುದು ಸಾಬೀತಾದರೆ, ಅಂತಹವರಿಂದ ಈವರೆಗೆ ಪಡೆದ ಹಣವನ್ನು ವಸೂಲಿ ಮಾಡಲು ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು. ಮೃತಪಟ್ಟ ಫಲಾನುಭವಿಗಳ ಹೆಸರನ್ನು ತಕ್ಷಣವೇ ಪಿಂಚಣಿ ತಂತ್ರಾಂಶದಿಂದ ತೆಗೆದುಹಾಕುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಿಯಮಾನುಸಾರ ಎಲ್ಲಾ ಪರಿಶೀಲನೆ ಮುಗಿದ ನಂತರವೂ ಪಿಂಚಣಿ ಬರದೇ ಇದ್ದರೆ, ಫಲಾನುಭವಿಗಳು ಆಧಾರ್ ಕಾರ್ಡ್ ನಕಲು, ಬ್ಯಾಂಕ್ ಪಾಸ್ ಬುಕ್ ನಕಲು, ಜೀವಿತ ಪ್ರಮಾಣ ಪತ್ರ(ಅಗತ್ಯವಿದ್ದಲ್ಲಿ), ಪಿಂಚಣಿ ಮಂಜೂರಾತಿ ಆದೇಶದ ಪ್ರತಿಯೊಂದಿಗೆ ಸ್ಥಳೀಯ ನಾಡಕಚೇರಿ ಅಥವಾ ನೆಮ್ಮದಿ ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ ಎಂದವರು ತಿಳಿಸಿದ್ದಾರೆ.

ಕುಟುಂಬ ದತ್ತಾಂಶದಿಂದ ಪಡೆದ ಮಾಹಿತಿಗಳನ್ನು ಜಿಲ್ಲೆಯಲ್ಲಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಮಾಹಿತಿಯೊಂದಿಗೆ ಸಂಯೋಜಿಸಿದಾಗ ಗುರುತಿಸಲಾದ ಸಂದೇಹಾಸ್ಪದ ಫಲಾನುಭವಿಗಳು, ಭೌತಿಕ ಪರಿಶೀಲನೆ ಸಂದರ್ಭದಲ್ಲಿ ದಾಖಲಾತಿಗಳನ್ನು ಹಾಜರುಪಡಿಸದ, ನೀಡಿದ ವಿಳಾಸದಲ್ಲಿ ವಾಸವಿಲ್ಲದ ಮತ್ತು ಆದಾಯ ದೃಢೀಕರಣ ಪತ್ರ ಹಾಜರುಪಡಿಸದ ವ್ಯಕ್ತಿಗಳ ಪಿಂಚಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಪ್ರಸ್ತುತ ಗ್ರಾಮ ಆಡಳಿತ ಅಧಿಕಾರಿಗಳು ಸಂಯೋಜನೆ ಮೊಬೈಲ್‌ ಆಪ್‌ ಮೂಲಕ ಪರಿಶೀಲಿಸಿದ ನಂತರ ಸಂಬಂಧಪಟ್ಟ ತಾಲೂಕುಗಳ ತಹಶೀಲ್ದಾರರಿಂದ ನಿಯಮಾನುಸಾರ ಪರಿಶೀಲಿಸಿ ಅರ್ಪ ಫಲಾನುಭವಿಗಳಿಗೆ ಪಿಂಚಣಿ ಮುಂದುವರೆಸಲು ಸರ್ಕಾರವು ನಿರ್ದೇಶನ ನೀಡಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular