HomeIndia16,000 ಸ್ಟಾರ್ಟ್‌ ಅಪ್‌ ಗಳಿಗೆ ನೆಲೆಯಾದ ಕರ್ನಾಟಕ ಭಾರತದ ಸ್ಟಾರ್ಟ್ ಅಪ್ ಕೇಂದ್ರ: ‘ಬ್ರಿಡ್ಜ್ ಟು...

16,000 ಸ್ಟಾರ್ಟ್‌ ಅಪ್‌ ಗಳಿಗೆ ನೆಲೆಯಾದ ಕರ್ನಾಟಕ ಭಾರತದ ಸ್ಟಾರ್ಟ್ ಅಪ್ ಕೇಂದ್ರ: ‘ಬ್ರಿಡ್ಜ್ ಟು ಬೆಂಗಳೂರು’ ಕಾರ್ಯಕ್ರಮದಲ್ಲಿ CM ಸಿದ್ಧರಾಮಯ್ಯ

ನವದೆಹಲಿ: ತಂತ್ರಜ್ಞಾನದ ಜೊತೆಗೆ ವ್ಯಾಪಾರ, ನಾವೀನ್ಯತೆ, ಜನರ ಸಹಯೋಗ ಹಾಗೂ ವಿಶ್ವದೊಂದಿಗಿನ ಪಾಲುದಾರಿಕೆಯತ್ತ ಕರ್ನಾಟಕ ಆಸಕ್ತಿ ಹೊಂದಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ BENGALURU TECH SUMMITನ ಪೂರ್ವಭಾವಿಯಾಗಿ ದೆಹಲಿಯಲ್ಲಿ ಶುಕ್ರವಾರ ನಡೆದ ವಿವಿಧ ರಾಷ್ಟ್ರಗಳ ರಾಯಭಾರಿಗಳು ಹಾಗೂ ಹೈ ಕಮಿಷನರ್ ಗಳ ಜೊತೆಗಿನ ಬ್ರಿಡ್ಜ್ ಟು ಬೆಂಗಳೂರು (Bridge to BENGALURU) ಸಂವಾದದಲ್ಲಿ ಭಾಗವಹಿಸಿ, ಕರ್ನಾಟಕದ ಅಭಿವೃದ್ಧಿಯಲ್ಲಿ ಪಾಲುದಾರರಾಗುವಂತೆ ಕರೆ ನೀಡಿದರು.

ಬ್ರಿಡ್ಜ್ ಟು ಬೆಂಗಳೂರು ಕಾರ್ಯಕ್ರಮವು ರಾಜತಾಂತ್ರಿಕ ಮಾತುಕತೆಗಿಂತಲೂ ಭಿನ್ನವಾಗಿದ್ದು, ಆಲೋಚನೆ, ಆರ್ಥಿಕತೆಗಳು ಮತ್ತು ಜನರನ್ನು ಒಂದುಗೂಡಿಸುವ ವೇದಿಕೆಯಾಗಿದೆ. ಜಿಐಎ( Global Innovation Alliance) ಮೂಲಕ ಜಾಗತಿಕ ಪಾಲುದಾರಿಕೆಗಳನ್ನು ಬಲಪಡಿಸುವ ಕರ್ನಾಟಕದ ಬದ್ಧತೆಯ ಸಂಕೇತವಾಗಿದೆಯಲ್ಲದೆ ಮುಂದಿನ ನವೆಂಬರ್ ತಿಂಗಳಲ್ಲಿ ನಡೆಯಲಿರುವ ಬೆಂಗಳೂರು ಟೆಕ್ ಸಮ್ಮಿಟ್ 2026 ರ ಮುನ್ನುಡಿಯೂ ಹೌದು ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಕಾರ್ಯಕ್ರಮದ ಮೂಲಕ ನಾವೀನ್ಯತೆ, ಸಂಶೋಧನೆ, ಶಿಕ್ಷಣ, ಕೌಶಲ್ಯ, ಸ್ಟಾಟ್ಟ್ ಅಪ್ ಮತ್ತು ಹೂಡಿಕೆಗಳಲ್ಲಿ  ದೀರ್ಘಕಾಲಿಕ ಸಹಯೋಗವನ್ನು ರಾಜ್ಯ ಬಯಸುತ್ತದೆ.  ವಿಶ್ವವೇ ಒಂದು ಸಂಪರ್ಕ ಜಾಲವಾಗಿರುವ ಈ  ಹೊತ್ತಿನಲ್ಲಿ ಇಂಥ ಪಾಲುದಾರಿಕೆಗಳು ಜಾಗತಿಕ ಸವಾಲುಗಳನ್ನು ಪರಿಹರಿಸಲು ಮತ್ತು ಒಟ್ಟಾಗಿ ಬೆಳೆಯಲು ಹೊಸ ಅವಕಾಶಗಳನ್ನು ದೊರಕಿಸಲು ಅಗತ್ಯವೂ ಆಗಿದೆ ಎಂದು ಹೇಳಿದ್ದಾರೆ.

ಭಾರತದ ಸಿಲಿಕಾನ್ ವ್ಯಾಲಿ ಎಂದೇ ಜಾಗತಿಕವಾಗಿ ಗುರುತಿಸಲ್ಪಟ್ಟಿರುವ ಬೆಂಗಳೂರು ಸಮಗ್ರ ನಾವೀನ್ಯತಾ ಪರಿಸರ ವ್ಯವಸ್ಥೆಯಾಗಿ ವಿಕಸನಗೊಂಡಿದೆ. ರಾಜ್ಯವು 16,000 ಸ್ಟಾಟ್ಟ್ ಅಪ್ ಗಳಿಗೆ ನೆಲೆಯಾಗಿದ್ದು, ಭಾರತದ ಸ್ಟಾರ್ಟ್ ಅಪ್ ಕೇಂದ್ರವಾಗಿದೆ. ಭಾರತದ ಜಾಗತಿಕ ಸಾಮರ್ಥ್ಯ ಕೇಂದ್ರಗಳಲ್ಲಿ ಸುಮಾರು ಮೂರನೇ ಒಂದು ಭಾಗ, ಅಂದರೆ 550 ಕ್ಕೂ ಹೆಚ್ಚು GCC ಗಳನ್ನು ಹೊಂದಿದೆ.  ಅತ್ಯಾಧುನಿಕ ನಾವೀನ್ಯತೆ ಮತ್ತು ಪ್ರತಿಭೆಯನ್ನು ಪೋಷಿಸುವ ಪ್ರಮುಖ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳ ಬೃಹತ್ ಜಾಲವನ್ನೇ ಬೆಂಗಳೂರು ಹೊಂದಿದೆ ಎಂದು ತಿಳಿಸಿದ್ದಾರೆ.

ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನದಿಂದ ಹಿಡಿದು ಅಂತರಿಕ್ಷಯಾನ, ಅರೆವಾಹಕಗಳು, ಬಾಹ್ಯಾಕಾಶ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ಕ್ವಾಂಟಮ್ ಸಂಶೋಧನೆಯವರೆಗೆ ಕರ್ನಾಟಕವು ತಾಂತ್ರಿಕ ಪರಿವರ್ತನೆಯಲ್ಲಿ ನಿರಂತರವಾಗಿ ಮುಂಚೂಣಿಯಲ್ಲಿದೆ. ನಮ್ಮ ರಾಜ್ಯದಲ್ಲಿ ನಾವೀನ್ಯತೆ ಕೇವಲ ಆರ್ಥಿಕ ಚಟುವಟಿಕೆಯಲ್ಲ, ಅದು ಒಂದು ಜೀವನ ವಿಧಾನವಾಗಿದೆ ಎಂದರು.

ಕೌಶಲ್ಯಯುತ ಯುವಜನ, ವಿಶ್ವ ದರ್ಜೆಯ ಸಂಶೋಧನೆ ಮತ್ತು ಶೈಕ್ಷಣಿಕ ಸಂಸ್ಥೆಗಳು, ಬಲಿಷ್ಠ ಡಿಜಿಟಲ್ ಮತ್ತು ಭೌತಿಕ ಮೂಲಸೌಕರ್ಯ, ತಡೆರಹಿತ ಜಾಗತಿಕ ಸಂಪರ್ಕ ಮತ್ತು ಎಲ್ಲರನ್ನೂ ಒಳಗೊಂಡ ಸಾಮಾಜಿಕ ವಾತಾವರಣ ನಮ್ಮ ಸಾಮರ್ಥ್ಯ. ಮಾನವೀಯ ತಂತ್ರಜ್ಞಾನವನ್ನು ಹೊಂದುವುದು ಕರ್ನಾಟಕ ಸರ್ಕಾರದ ಭವಿಷ್ಯದ ಕಲ್ಪನೆಯಾಗಿದೆ. ನಮ್ಮ ಅಭಿವೃದ್ಧಿ ಮಾದರಿಯು ಸಾಮಾಜಿಕ ನ್ಯಾಯ, ಒಳಗೊಳ್ಳುವಿಕೆ ಮತ್ತು ಸುಸ್ಥಿರತೆಯ ತತ್ವಗಳನ್ನು ಹಾಗೂ ತ್ವರಿತ ಆರ್ಥಿಕ ಬೆಳವಣಿಗೆಯ ಮಧ್ಯೆ ಸಮತೋಲನವನ್ನು ಕಾಯ್ದುಕೊಳ್ಳಲಿದೆ ಎಂದು ತಿಳಿಸಿದ್ದಾರೆ.

ಈ ದೃಷ್ಟಿಯನ್ನು ಆಧರಿಸಿ ನಾವು ಐಟಿ, ಸ್ಟಾರ್ಟ್‌ಅಪ್‌ಗಳು, ಜೈವಿಕ ತಂತ್ರಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಕೌಶಲ್ಯದಲ್ಲಿ ಭವಿಷ್ಯತ್ ಕಾಲದ ನೀತಿಗಳನ್ನು ಜಾರಿಗೆ ತರುತ್ತಿದ್ದೇವೆ, ಭವಿಷ್ಯಕ್ಕೆ ಸಿದ್ಧವಾಗಿರುವ ಕಾರ್ಯಪಡೆಯನ್ನು ರಚಿಸಲು ಪ್ರತಿಭಾ ಅಭಿವೃದ್ಧಿಯಲ್ಲಿ ಹೂಡಿಕೆ ಮಾಡುತ್ತಿದ್ದೇವೆ ಮತ್ತು ಆರೋಗ್ಯ ರಕ್ಷಣೆ, ಶಿಕ್ಷಣ, ಕೃಷಿ ಮತ್ತು ಪರಿಸರ ಸುಸ್ಥಿರತೆಯಲ್ಲಿ ಸಾಮಾಜಿಕ ಸವಾಲುಗಳನ್ನು ಎದುರಿಸುವ ನಾವೀನ್ಯತೆಯನ್ನು ಉತ್ತೇಜಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

2032 ರ ವೇಳೆಗೆ ಕರ್ನಾಟಕವನ್ನು ಪ್ರತಿಭೆ, ತಂತ್ರಜ್ಞಾನ ಮತ್ತು ಸದೃಢತೆಯುಳ್ಳ USD 1 ಟ್ರಿಲಿಯನ್ ಆರ್ಥಿಕತೆಯಾಗಿ ಪರಿವರ್ತಿಸುವುದು ನಮ್ಮ ಆಕಾಂಕ್ಷೆಯಾಗಿದೆ. ಜಿಐಎ ಮೂಲಕ ಕರ್ನಾಟಕವು -ಸರ್ಕಾರಗಳು, ಶೈಕ್ಷಣಿಕ ಸಂಸ್ಥೆಗಳು , ಉದ್ಯಮದ ನಾಯಕರು ಮತ್ತು ವಿಶ್ವದ ಸ್ಟಾರ್ಟ್ ಅಪ್ ಗಳ ಜೊತೆಗೆ  ದೀರ್ಘಕಾಲಿಕ ಪಾಲುದಾರಿಕೆ ಮಾಡಿಕೊಳ್ಳುವ  ಗುರಿಹೊಂದಿದೆ. ಇಂಥ ಸಹಯೋಗಗಳು ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿ, ಪ್ರತಿಭಾ ವಿನಿಮಯ ಮತ್ತು ಕೌಶಲ್ಯದ ಚಲನೆ, ಸ್ಟಾರ್ಟ್ ಅಪ್  ಮಾರುಕಟ್ಟೆಯ ಪ್ರವೇಶ, ನೂತನ ತಂತ್ರಜ್ಞಾನಗಳಲ್ಲಿ ಸಹಯೋಗ ಮತ್ತು ಸುಸ್ಥಿರ  ಪರಿಸರ ಸಂಬಂಧಿ  ಪರಿಹಾರಗಳನ್ನು ಕಂಡುಕೊಳ್ಳಲು ಇಚ್ಚಿಸಿದೆ ಎಂದು ಹೇಳಿದ್ದಾರೆ.

ಬ್ರಿಡ್ಜ್ ಟು ಬೆಂಗಳೂರು ಕಾರ್ಯಕ್ರಮದ ಮೂಲಕ ಕರ್ನಾಟಕದೊಂದಿಗೆ ಪಾಲುದಾರಿಕೆ, ನಾವೀನ್ಯತೆ ಮತ್ತು  ಹೂಡಿಕೆ ಮಾಡಲು ಜಗತ್ತಿಗೆ ಆಹ್ವಾನ ನೀಡುತ್ತೇನೆ ಎಂದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ. ಜಯಚಂದ್ರ, ಕಿಯೋನಿಕ್ಸ್ ಚೇರ್ಮನ್ ಶರತ್ ಬಚ್ಚೇಗೌಡ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular