HomeIPL 2026IPL 2026: ಟೂರ್ನಿಯಲ್ಲಿ ಐದನೇ ಸೋಲುಂಡ ಕೊಲ್ಕತ್ತಾ; ಸತತ ಮೂರನೇ ಜಯ ಸಾಧಿಸಿದ ಗುಜರಾತ್

IPL 2026: ಟೂರ್ನಿಯಲ್ಲಿ ಐದನೇ ಸೋಲುಂಡ ಕೊಲ್ಕತ್ತಾ; ಸತತ ಮೂರನೇ ಜಯ ಸಾಧಿಸಿದ ಗುಜರಾತ್

ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ 2026ರ ಲೀಗ್ ಹಂತದ 25ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗುಜರಾತ್ ಟೈಟನ್ಸ್ 5 ವಿಕೆಟ್‌ಗಳ ಗೆಲುವನ್ನು ಕಂಡಿದೆ. ಈ ಮೂಲಕ ಮೊದಲ ಎರಡು ಪಂದ್ಯಗಳಲ್ಲಿ ಸೋತಿದ್ದ ಗುಜರಾತ್ ಹ್ಯಾಟ್ರಿಕ್ ಜಯ ಸಾಧಿಸಿದ್ದು, ಕೆಕೆಆರ್ ಐದನೇ ಸೋಲನ್ನು ಕಂಡಿದೆ.

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ಕ್ಯಾಮೆರಾನ್ ಗ್ರೀನ್ ಅಮೋಘ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 180 ರನ್‌ಗಳಿಗೆ ಆಲ್‌ಔಟ್ ಆಗಿ ಗುಜರಾತ್ ಟೈಟನ್ಸ್ ತಂಡಕ್ಕೆ 181 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟನ್ಸ್ ಶುಬ್‌ಮನ್ ಗಿಲ್ ಅರ್ಧಶತಕದ ನೆರವಿನಿಂದ 19.4 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 181 ರನ್ ಕಲೆಹಾಕಿತು.

ಕೊಲ್ಕತ್ತಾ ನೈಟ್ ರೈಡರ್ಸ್ ಇನ್ನಿಂಗ್ಸ್: ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ಪವರ್‌ಪ್ಲೇನಲ್ಲೇ ಮೂರು ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ನಾಯಕ ರಹಾನೆ ಡಕ್‌ಔಟ್ ಆದರೆ, ಅಂಗ್‌ಕ್ರಿಶ್ ರಘುವಂಶಿ 8 ರನ್ ಹಾಗೂ ಟಿಮ್ ಸೈಫರ್ಟ್ 19 ರನ್ ಗಳಿಸಿ ಔಟ್ ಆದರು. ಹೀಗೆ ಒಂದೆಡೆ ವಿಕೆಟ್ ಉರುಳಿದರೆ ಮತ್ತೊಂದೆಡೆ ಕ್ಯಾಮೆರಾನ್ ಗ್ರೀನ್ ಇನ್ನಿಂಗ್ಸ್‌ನ ಅಂತಿಮ ಎಸೆತದವರೆಗೂ ಕಣದಲ್ಲಿದ್ದು, 55 ಎಸೆತಗಳಲ್ಲಿ 79 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಇನ್ನುಳಿದಂತೆ ರೊವ್‌ಮನ್ ಪೊವೆಲ್ 27, ಅನುಕುಲ್ ರಾಯ್ 9, ರಿಂಕು ಸಿಂಗ್ 1, ರಮಣ್‌ದೀಪ್ ಸಿಂಗ್ 17, ಸುನಿಲ್ ನರೇನ್ ಡಕ್‌ಔಟ್, ಕಾರ್ತಿಕ್ ತ್ಯಾಗಿ 6 ರನ್ ಹಾಗೂ ಯಾವುದೇ ರನ್ ಗಳಿಸದ ವೈಭವ್ ಅರೋರಾ ಅಜೇಯರಾಗಿ ಉಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗುಜರಾತ್ ಟೈಟನ್ಸ್ ಪರ ಕಗಿಸೊ ರಬಾಡಾ ಮೂರು ವಿಕೆಟ್, ಮೊಹಮ್ಮದ್ ಸಿರಾಜ್ ಹಾಗೂ ಅಶೋಕ್ ಶರ್ಮಾ ತಲಾ ಎರಡು ವಿಕೆಟ್, ಪ್ರಸಿದ್ಧ್ ಕೃಷ್ಣ ಹಾಗೂ ರಶೀದ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದರು.

ಗುಜರಾತ್ ಟೈಟನ್ಸ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಸಾಯಿ ಸುದರ್ಶನ್ ಹಾಗೂ ಶುಬ್‌ಮನ್ ಗಿಲ್ ಸಮಾಧಾನಕರ ಆರಂಭ ಕಟ್ಟಿಕೊಟ್ಟರು. ಸುದರ್ಶನ್ 22 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜೋಸ್ ಬಟ್ಲರ್ 25 ರನ್ ಕಲೆಹಾಕಿದರೆ, ಜವಾಬ್ದಾರಿಯುತ ಆಟವನ್ನಾಡಿದ ನಾಯಕ ಶುಬ್‌ಮನ್ ಗಿಲ್ 50 ಎಸೆತಗಳಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 86 ರನ್ ಬಾರಿಸಿದರು. ಇನ್ನುಳಿದಂತೆ ವಾಷಿಂಗ್ಟನ್ ಸುಂದರ್ 13 ರನ್, ಗ್ಲೆನ್ ಫಿಲಿಪ್ಸ್ 19, ರಾಹುಲ್ ತೆವಾಟಿಯಾ ಅಜೇಯ 7 ರನ್ ಹಾಗೂ ಶಾರುಖ್ ಖಾನ್ ಅಜೇಯ 3 ರನ್ ಗಳಿಸಿದರು.

ಕೊಲ್ಕತ್ತಾ ನೈಟ್ ರೈಡರ್ಸ್ ಪರ ವರುಣ್ ಚಕ್ರವರ್ತಿ ಎರಡು, ಸುನಿಲ್ ನರೇನ್, ವೈಭವ್ ಅರೋರಾ ಹಾಗೂ ರಮಣ್‌ದೀಪ್ ಸಿಂಗ್ ತಲಾ ಒಂದೊಂದು ವಿಕೆಟ್ ಪಡೆದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular