HomeLatest Newsಪ್ರವಾಸೋದ್ಯಮ ವಸತಿ ಕ್ಷೇತ್ರಕ್ಕೆ ಹೊಸ ಆಯಾಮ: ಪ್ರತ್ಯೇಕ ಬೆಡ್ & ಬ್ರೇಕ್‌ಫಾಸ್ಟ್ (B&B) ವ್ಯವಸ್ಥೆ ಪರಿಚಯಿಸಿದ...

ಪ್ರವಾಸೋದ್ಯಮ ವಸತಿ ಕ್ಷೇತ್ರಕ್ಕೆ ಹೊಸ ಆಯಾಮ: ಪ್ರತ್ಯೇಕ ಬೆಡ್ & ಬ್ರೇಕ್‌ಫಾಸ್ಟ್ (B&B) ವ್ಯವಸ್ಥೆ ಪರಿಚಯಿಸಿದ ಕರ್ನಾಟಕ ಪ್ರವಾಸೋದ್ಯಮ ಇಲಾಖೆ

ಬೆಂಗಳೂರು- ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯು ರಾಜ್ಯದ ಪ್ರವಾಸೋದ್ಯಮ ವಸತಿ ಕ್ಷೇತ್ರದಲ್ಲಿ ಮಹತ್ವದ ನೀತಿ ಸುಧಾರಣೆಯಾಗಿ ಹೋಂಸ್ಟೇ (Homestay) ಮತ್ತು ಬೆಡ್ & ಬ್ರೇಕ್‌ಫಾಸ್ಟ್ (Bed & Breakfast – B&B) ವ್ಯವಸ್ಥೆಗಳನ್ನು ಪ್ರತ್ಯೇಕ ವರ್ಗಗಳಾಗಿ ಗುರುತಿಸಿ, ವೃತ್ತಿಪರವಾಗಿ ನಿರ್ವಹಿಸಲ್ಪಡುವ ಪ್ರವಾಸಿಗರ ವಸತಿ ವ್ಯವಸ್ಥೆಗಾಗಿ ವಿಶೇಷ ಚೌಕಟ್ಟನ್ನು ರೂಪಿಸಿದೆ.

ಇದರೊಂದಿಗೆ ಸಮುದಾಯ ಆಧಾರಿತ ಹೋಂಸ್ಟೇಗಳ ಮೂಲ ಸ್ವರೂಪವನ್ನು ಸಂರಕ್ಷಿಸುವ ಜೊತೆಗೆ ಪ್ರವಾಸೋದ್ಯಮ ವಲಯಕ್ಕೆ ಮತ್ತಷ್ಟು ಸ್ಪಷ್ಟತೆ ಮತ್ತು ವ್ಯವಸ್ಥಿತ ನಿಯಂತ್ರಣ ಒದಗಿಸಿದೆ.

ಹೋಂಸ್ಟೇ ಮತ್ತು B&B: ಎರಡು ಪ್ರತ್ಯೇಕ ವಿಭಾಗಗಳ ವ್ಯಾಖ್ಯಾನ

‘ಕರ್ನಾಟಕ ಹೋಂಸ್ಟೇ ನೋಂದಣಿ ಮಾರ್ಗಸೂಚಿ–2025’ ಅಡಿಯಲ್ಲಿ ಹೋಂಸ್ಟೇ ಮತ್ತು ಬೆಡ್ & ಬ್ರೇಕ್‌ಫಾಸ್ಟ್ ವ್ಯವಸ್ಥೆಗಳನ್ನು ಎರಡು ಪ್ರತ್ಯೇಕ ವಿಭಾಗಗಳಾಗಿ ವ್ಯಾಖ್ಯಾನಿಸಲಾಗಿದೆ. ರಾಜ್ಯದ ಪ್ರವಾಸೋದ್ಯಮ ವಸತಿ ಕ್ಷೇತ್ರದಲ್ಲಿ ಸ್ಪಷ್ಟ ನಿಯಂತ್ರಣ ವ್ಯವಸ್ಥೆ ರೂಪಿಸುವುದರ ಜೊತೆಗೆ, ಸೇವೆಯ ಗುಣಮಟ್ಟ ಹೆಚ್ಚಿಸುವುದು ಹಾಗೂ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶವನ್ನು ಈ ಕ್ರಮ ಹೊಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೊಸ ಮಾರ್ಗಸೂಚಿಗಳ ಪ್ರಕಾರ, ಹೋಂಸ್ಟೇ ಎಂದರೆ ಮನೆ / ಖಾಸಗಿ ನಿವಾಸದಲ್ಲಿ ಮಾಲೀಕರು ಅಥವಾ ಅವರ ಕುಟುಂಬದ ಸದಸ್ಯರು (ಪತಿ/ಪತ್ನಿ ಅಥವಾ ಮಕ್ಕಳು) ವಾಸವಾಗಿದ್ದು, ಪ್ರವಾಸಿಗರಿಗೆ ಒಂದು ಕೊಠಡಿಯಿಂದ ಗರಿಷ್ಠ ಆರು ಕೊಠಡಿಗಳವರೆಗೆ ವಸತಿ ಒದಗಿಸುವ ವ್ಯವಸ್ಥೆಯಾಗಿದೆ. ಹೋಂಸ್ಟೇಯನ್ನು ವಾಣಿಜ್ಯೇತರ (Non-Commercial) ಚಟುವಟಿಕೆಯಾಗಿ ಪರಿಗಣಿಸಲಾಗಿದೆ.

ಬೆಡ್ & ಬ್ರೇಕ್‌ಫಾಸ್ಟ್ (B&B) ವ್ಯವಸ್ಥೆಯಲ್ಲಿ ಮನೆ / ಖಾಸಗಿ ನಿವಾಸದಲ್ಲಿ ಆಸ್ತಿಯ ಮಾಲೀಕರು ಸ್ವತಃ ವಾಸಿಸುವುದಿಲ್ಲ. ಅವರ ಪರವಾಗಿ ನಿಯೋಜಿತ ನಿರ್ವಾಹಕರು ಅಥವಾ ಏಜೆಂಟ್‌ಗಳು ಸ್ಥಳದಲ್ಲೇ ವಾಸವಿದ್ದು, ಅತಿಥಿಗಳಿಗೆ ಅಗತ್ಯ ಸೇವೆಗಳನ್ನು ಒದಗಿಸುತ್ತಾರೆ. ಈ ವ್ಯವಸ್ಥೆಯಲ್ಲಿ ೬ ಕೊಠಡಿಗಳು ಅಥವಾ ೧೨ ಬೆಡ್‌ಗಳನ್ನು ನಿರ್ವಹಿಸಲು ಅವಕಾಶವಿದ್ದು, ಇದನ್ನು ವಾಣಿಜ್ಯ ಚಟುವಟಿಕೆ (Commercial Activity) ಎಂದು ಪರಿಗಣಿಸಲಾಗಿದೆ.

ಬೆಡ್ & ಬ್ರೇಕ್‌ಫಾಸ್ಟ್ ವಿಭಾಗಕ್ಕೆ ಪ್ರತ್ಯೇಕ ಕಾರ್ಯಾಚರಣಾ ಮಾರ್ಗಸೂಚಿಗಳನ್ನು ಸರ್ಕಾರ ಹೊರಡಿಸಲಿದೆ.

ಪ್ರವಾಸಿಗರು ಮತ್ತು ಉದ್ಯಮಿಗಳಿಗೆ ಲಾಭ

ಈ ನೀತಿ ಬದಲಾವಣೆಯಿಂದ ಪ್ರವಾಸಿಗರು ತಾವು ಆಯ್ಕೆ ಮಾಡುತ್ತಿರುವ ವಸತಿ ವ್ಯವಸ್ಥೆಯ ಸ್ವರೂಪವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಲು ಸಾಧ್ಯವಾಗಲಿದ್ದು, ಹೋಂಸ್ಟೇ ಮತ್ತು ಬೆಡ್ & ಬ್ರೇಕ್‌ಫಾಸ್ಟ್ ವ್ಯವಸ್ಥೆಗಳನ್ನು ಅವುಗಳ ಕಾರ್ಯವೈಖರಿಯ ಆಧಾರದ ಮೇಲೆ ಪರಿಣಾಮಕಾರಿಯಾಗಿ ನಿಯಂತ್ರಿಸಲು ಇಲಾಖೆಗೆ ಅನುಕೂಲವಾಗಲಿದೆ. ಜೊತೆಗೆ, ಖಾಸಗಿ ಆಸ್ತಿ ಮಾಲೀಕರು ಮತ್ತು ಪ್ರವಾಸೋದ್ಯಮ ಉದ್ಯಮಿಗಳು ನಿಯಮಬದ್ಧವಾಗಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಪಾಲ್ಗೊಳ್ಳಲು ಹೊಸ ಅವಕಾಶಗಳನ್ನು ಇದು ಸೃಷ್ಟಿಸಲಿದೆ.

ವಿಶೇಷವಾಗಿ, ಹೋಟೆಲ್‌ಗಳ ಕೊರತೆ ಇರುವ ಅಥವಾ ಪ್ರವಾಸಿಗರ ಸಂಖ್ಯೆ ವೇಗವಾಗಿ ಹೆಚ್ಚುತ್ತಿರುವ ಪ್ರವಾಸಿ ತಾಣಗಳಲ್ಲಿ ಬೆಡ್ & ಬ್ರೇಕ್‌ಫಾಸ್ಟ್ ವ್ಯವಸ್ಥೆ ಗುಣಮಟ್ಟದ ಹೆಚ್ಚುವರಿ ವಸತಿ ಸೌಲಭ್ಯ ಒದಗಿಸುವ ಮೂಲಕ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ.

ಸುರಕ್ಷತೆ ಮತ್ತು ನಿಯಂತ್ರಣ ಕ್ರಮಗಳು

ಇದರ ಜೊತೆಗೆ, ಪ್ರವಾಸೋದ್ಯಮ ಇಲಾಖೆ ನೋಂದಾಯಿತ ವಸತಿ ಘಟಕಗಳಿಗೆ ನೋಂದಣಿ ಪ್ರಮಾಣಪತ್ರದ ಪ್ರದರ್ಶನ, ಅತಿಥಿಗಳ ದಾಖಲೆ ನಿರ್ವಹಣೆ, ಸಿಬ್ಬಂದಿಯ ಪೊಲೀಸ್ ಪರಿಶೀಲನೆ, ತುರ್ತು ಪರಿಸ್ಥಿತಿಗಳ ನಿರ್ವಹಣೆ ಹಾಗೂ ವಿವಿಧ ಸುರಕ್ಷತಾ ಕ್ರಮಗಳನ್ನು ಕಡ್ಡಾಯಗೊಳಿಸುವ ಮೂಲಕ ಪ್ರವಾಸಿಗರ ಸುರಕ್ಷತೆ ಮತ್ತು ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಲು ಕ್ರಮ ಕೈಗೊಂಡಿದೆ.

ಈ ಪ್ರತ್ಯೇಕ ಬೆಡ್ & ಬ್ರೇಕ್‌ಫಾಸ್ಟ್ ವ್ಯವಸ್ಥೆ ಪರಿಚಯಿಸುವ ಮೂಲಕ ಕರ್ನಾಟಕವು ಸಮುದಾಯ ಆಧಾರಿತ ಹೋಂಸ್ಟೇಗಳ ವೈಶಿಷ್ಟ್ಯವನ್ನು ಉಳಿಸಿಕೊಂಡು, ವೃತ್ತಿಪರವಾಗಿ ನಿರ್ವಹಿಸಲ್ಪಡುವ ಪ್ರವಾಸೋದ್ಯಮ ವಸತಿ ಕ್ಷೇತ್ರಕ್ಕೆ ಹೊಸ ದಿಕ್ಕು ನೀಡುವ ಮಹತ್ವದ ಹೆಜ್ಜೆ ಇಟ್ಟಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular