ಬೆಂಗಳೂರು- ರಾಜ್ಯದಲ್ಲಿ ಮಳೆಯ ಕೊರತೆಯಿಂದಾಗಿ ತೀವ್ರಗೊಂಡಿರುವ ಬರ ಪರಿಸ್ಥಿತಿಯು ಜಲಮೂಲಗಳ ಮೇಲೆ ಗಂಭೀರ ಪರಿಣಾಮ ಬೀರಿದೆ.
ಒಟ್ಟು 36,321 ಕೆರೆಗಳ ಪೈಕಿ ಕೇವಲ 584 ಕೆರೆಗಳು ಮಾತ್ರ ಸಂಪೂರ್ಣವಾಗಿ ಭರ್ತಿಯಾಗಿದ್ದು, 5,862 ಕೆರೆಗಳು ಸಂಪೂರ್ಣವಾಗಿ ಬತ್ತಿಹೋಗಿವೆ. ಈ ಮೂಲಕ ರಾಜ್ಯದಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಂಕಷ್ಟದ ಭೀಕರತೆ ಬಯಲಾಗಿದೆ.
ಇತ್ತೀಚಿಗೆ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವೇರ ಅವರ ಅಧ್ಯಕ್ಷತೆಯಲ್ಲಿ ನಡೆದ ಬರ ಪರಿಸ್ಥಿತಿ ಮತ್ತು ಅಂತರ್ಜಲ ಮಟ್ಟದ ಕುರಿತಾದ ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ಈ ಆತಂಕಕಾರಿ ಅಂಶ ಹೊರಬಿದ್ದಿದೆ.
ಸಣ್ಣ ನೀರಾವರಿ ಇಲಾಖೆ ಕೆರೆಗಳ ಸ್ಥಿತಿ
ಸಣ್ಣ ನೀರಾವರಿ ಇಲಾಖೆ ಕೆರೆಗಳು:
ಒಟ್ಟು 3,817 ಕೆರೆಗಳಲ್ಲಿ 616 ಕೆರೆಗಳು ಸಂಪೂರ್ಣ ಬತ್ತಿಹೋಗಿದ್ದು, ಕೇವಲ 22 ಕೆರೆಗಳು ಮಾತ್ರ ಭರ್ತಿಯಾಗಿವೆ. ಉಳಿದ ಕೆರೆಗಳಲ್ಲಿ ಕನಿಷ್ಠ ಪ್ರಮಾಣದ ನೀರು ಮಾತ್ರ ಲಭ್ಯವಿದೆ.
ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕೆರೆಗಳ ಸ್ಥಿತಿ
ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕೆರೆಗಳು
ಗ್ರಾಮೀಣ ಭಾಗದ 32,504 ಕೆರೆಗಳ ಪೈಕಿ 5,246 ಕೆರೆಗಳು ಬತ್ತಿಹೋಗಿವೆ. ಕೇವಲ 562 ಕೆರೆಗಳು ಮಾತ್ರ ಭರ್ತಿಯಾಗಿದ್ದು, ಸಾವಿರಾರು ಕೆರೆಗಳಲ್ಲಿ ನೀರಿನ ಮಟ್ಟ ತಳಮುಟ್ಟಿದೆ.ಕೆರೆಗಳು ಬತ್ತುವುದರಿಂದ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯುತ್ತಿದ್ದು, ಇದು ಕುಡಿಯುವ ನೀರಿನ ಲಭ್ಯತೆಯ ಜತೆಗೆ ಒಳನಾಡು ಮೀನುಗಾರಿಕೆ ಚಟುವಟಿಕೆಗಳ ಮೇಲೂ ತೀವ್ರ ಪ್ರತಿಕೂಲ ಪರಿಣಾಮ ಬೀರುತ್ತಿದೆ.
ಸರ್ಕಾರದ ತುರ್ತು ಕ್ರಮಗಳು
ಸರ್ಕಾರದ ತುರ್ತು ಕ್ರಮಗಳು
ರಾಜ್ಯದಲ್ಲಿ 2025ರ ಅಕ್ಟೋಬರ್‍ನಿಂದಲೇ ಮಳೆಯ ಅಭಾವದ ಪರಿಸ್ಥಿತಿ ಆರಂಭವಾಗಿ, ಮೇಲ್ಮೈ ನೀರಿನ ಮೂಲಗಳು ಗಣನೀಯವಾಗಿ ಕುಸಿದಿವೆ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಜಿ. ಪರಮೇಶ್ವರ ತಿಳಿಸಿದ್ದಾರೆ.
ಪÀರಿಸ್ಥಿತಿಯ ಗಂಭೀರತೆಯನ್ನು ಮನಗಂಡು ಸರ್ಕಾರವು ಈ ಕೆಳಗಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.ಕುಡಿಯುವ ನೀರಿನ ಪೂರೈಕೆಗೆ ಯಾವುದೇ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಲು ಮತ್ತು ಲಭ್ಯವಿರುವ ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಜಿಲ್ಲಾಡಳಿತಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಕುಡಿಯುವ ನೀರು ಪೂರೈಸುವ ತುರ್ತು ಕಾರ್ಯಗಳಿಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 1 ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಇದನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಮಳೆಯ ಕೊರತೆಯ ಮುನ್ಸೂಚನೆಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ನಾಗರಿಕರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ತಡೆಯಲು ರಾಜ್ಯ ಸರ್ಕಾರವು ಹಗಲಿರುಳು ಪರಿಹಾರ ಕಾರ್ಯಗಳನ್ನು ಕೈಗೊಳ್ಳುತ್ತಿದೆ.

