ಕರ್ನಾಟಕ ಕಾಂಗ್ರೆಸ್‌ನ 20ಕ್ಕೂ ಹೆಚ್ಚು ಶಾಸಕರು ವಿದೇಶ ಪ್ರವಾಸಕ್ಕೆ ತಯಾರಾಗಿದ್ದಾರೆ. ಇಂದು ರಾತ್ರಿ 8 ಗಂಟೆಗೆ ಶಾಸಕರು ಆಸ್ಟ್ರೇಲಿಯಾಗೆ ಪ್ರಯಾಣ ಮಾಡಲಿದ್ದಾರೆ. ಶಾಸಕರ ವಿದೇಶ ಪ್ರವಾಸದ ಕುರಿತು ಭಾರೀ ಚರ್ಚೆಗಳು ನಡೆಯುತ್ತಿವೆ. ಕೆಲವು ಶಾಸಕರು ದಿಢೀರ್ ಆಗಿ ಪ್ರವಾಸ ರದ್ದುಗೊಳಿಸಿದ್ದು ಸಹ ಕುತೂಹಲಕ್ಕೆ ಕಾರಣವಾಗಿದೆ.
ಶಾಸಕರ ವಿದೇಶ ಪ್ರವಾಸದ ಬಗ್ಗೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ವಿದೇಶ ಪ್ರವಾಸ ಟೀಕಿಸುವ ಪ್ರತಿಪಕ್ಷಗಳಿಗೆ ಖಡಕ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಇದೆ ಎಂಬ ಸುದ್ದಿಗಳನ್ನು ತಳ್ಳಿ ಹಾಕಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಪ್ರದೀಪ್ ಈಶ್ವರ್, “ಶಾಸಕರ ವಿದೇಶ ಪ್ರವಾಸ ಕೇವಲ ಮಜಾ ಮಾಡುವುದಕ್ಕಲ್ಲ, ಬದಲಾಗಿ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿರುವ ಅಧ್ಯಯನ ಪ್ರವಾಸಕ್ಕಾಗಿ” ಎಂದರು.
“ವಿರೋಧ ಪಕ್ಷದ ನಾಯಕರು ವಿದೇಶ ಪ್ರವಾಸದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಇದು ಇಲಾಖೆಯಿಂದ ಅಧಿಕೃತವಾಗಿ ನಡೆಯುತ್ತಿರುವ ಅಧ್ಯಯನ ಪ್ರವಾಸ. ಈ ಪ್ರವಾಸಕ್ಕೆ ಯಾರು ಬೇಕಾದರೂ ಹೋಗಬಹುದಿತ್ತು. ಇಲ್ಲಿ ಯಾವುದೇ ನಿರ್ಬಂಧವಿರಲಿಲ್ಲ” ಎಂದು ಹೇಳಿದರು.
“ಮುಖ್ಯವಾಗಿ ಇಲ್ಲಿ ಆ ಗುಂಪು, ಈ ಗುಂಪು ಎನ್ನುವ ಭೇದಭಾವವಿಲ್ಲ. ಎಲ್ಲರೂ ಒಗ್ಗಟ್ಟಿನಿಂದಲೇ ತೆರಳುತ್ತಿದ್ದಾರೆ. ವಿರೋಧ ಪಕ್ಷದವರಿಗೆ ಮಾಡಲು ಕೆಲಸವಿಲ್ಲದೆ ನಮ್ಮ ಶಾಸಕರ ವೈಯಕ್ತಿಕ ಮತ್ತು ಅಧಿಕೃತ ಪ್ರವಾಸಗಳನ್ನು ಗುರಿಯಾಗಿಸಿಕೊಳ್ಳುತ್ತಿದ್ದಾರೆ” ಎಂದು ತಿಳಿಸಿದರು.
“ಸರ್ಕಾರ ಸುಭದ್ರವಾಗಿದೆ ಮತ್ತು ಗ್ಯಾರಂಟಿ ಯೋಜನೆಗಳ ಮೂಲಕ ಜನರ ಮನಗೆದ್ದಿದೆ. ಇದನ್ನು ಸಹಿಸಲಾಗದೆ ಇಂತಹ ಚರ್ಚೆಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ” ಎಂದು ಪ್ರದೀಪ್ ಈಶ್ವರ್ ಕಿಡಿಕಾರಿದರು.
ನಾಯಕತ್ವ ಬದಲಾವಣೆ: ಶಾಸಕ ಪ್ರದೀಪ್ ಈಶ್ವರ್ ನಾಯಕತ್ವ ಬದಲಾವಣೆ ಚರ್ಚೆಯ ಕುರಿತು ಸಹ ಪ್ರತಿಕ್ರಿಯೆ ನೀಡಿದರು. “ನಾಯಕತ್ವ ಬದಲಾವಣೆಯ ಬಗ್ಗೆ ಸಣ್ಣಮಟ್ಟದ ಚರ್ಚೆಗಳು ನಡೆಯುತ್ತಿರುವುದು ನಿಜ. ಒಂದು ದೊಡ್ಡ ಪಕ್ಷ ಎಂದ ಮೇಲೆ ಅಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಇರುವುದು ಸಹಜ. ಆದರೆ ಇದನ್ನು ದೊಡ್ಡ ಹಗರಣ ಎನ್ನುವಂತೆ ಬಿಂಬಿಸುವುದು ತಪ್ಪು” ಎಂದು ಕಿವಿಮಾತು ಹೇಳಿದರು.
“ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅತ್ಯಂತ ಅನ್ಯೋನ್ಯವಾಗಿದ್ದಾರೆ. ಅವರ ನಡುವೆ ಯಾವುದೇ ದೊಡ್ಡ ಮಟ್ಟದ ವೈಮನಸ್ಸಿಲ್ಲ. ಇಬ್ಬರೂ ಜೊತೆಯಾಗಿ ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ನಾಯಕತ್ವದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವುದು ಹೈಕಮಾಂಡ್. ಆ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ” ಎಂದು ಪ್ರದೀಪ್ ಈಶ್ವರ್ ತಿಳಿಸಿದರು.

