ಕರ್ನಾಟಕದ ಬಜೆಟ್ ಅಧಿವೇಶನಕ್ಕೆ ದಿನಾಂಕ ನಿಗದಿಯಾಗಿದೆ. ಮಾರ್ಚ್ 6ರಿಂದ 27ರ ತನಕ ಒಟ್ಟು 14 ದಿನಗಳ ಕಾಲ ರಾಜ್ಯ ಬಜೆಟ್ ಅಧಿವೇಶನ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 6ರಂದು ಕರ್ನಾಟಕ ಬಜೆಟ್ 2026-27 ಮಂಡನೆ ಮಾಡಲಿದ್ದಾರೆ. ಇದು ಸಿದ್ದರಾಮಯ್ಯ ಮಂಡನೆ ಮಾಡುತ್ತಿರುವ 17ನೇ ಬಜೆಟ್. ಈ ಮೂಲಕ ಅವರು ರಾಜ್ಯ ರಾಜಕೀಯದಲ್ಲಿ ಹೊಸ ದಾಖಲೆ ಬರೆಯಲಿದ್ದಾರೆ.
ಈ ಬಾರಿಯ ಬಜೆಟ್‌ನಲ್ಲಿ ಬೆಂಗಳೂರು ನಗರಕ್ಕೆ ಬಂಪರ್ ಕೊಡುಗೆ ಸಿಗಲಿದೆ. ಕಾರಣ ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಚುನಾವಣೆ. ಸುಪ್ರೀಂಕೋರ್ಟ್ ಆದೇಶದ ಅನ್ವಯ ಜೂನ್ 30ರೊಳಗೆ ಜಿಬಿಎ ಚುನಾವಣೆಯನ್ನು ನಡೆಸಬೇಕಿದೆ.
369 ವಾರ್ಡ್, 5 ನಗರ ಪಾಲಿಕೆಗಳನ್ನು ಹೊಂದಿರುವ ಜಿಬಿಎ ಚುನಾವಣೆ ಆಡಳಿತ ಪಕ್ಷ ಕಾಂಗ್ರೆಸ್ ಪಾಲಿಗೆ ಪ್ರತಿಷ್ಠೆಯಾಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿಕೂಟಗಳು ಚುನಾವಣೆ ಗೆದ್ದು ಆಡಳಿತ ಪಕ್ಷಕ್ಕೆ ಮುಜುಗರ ಉಂಟು ಮಾಡಲು ತಂತ್ರ ರೂಪಿಸುತ್ತಿವೆ.
ಬಜೆಟ್‌ನಲ್ಲಿ ಅನುದಾನ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು ಜಿಬಿಎ ಆಗಿ ಬದಲಾವಣೆ ಮಾಡಿರುವ ಸರ್ಕಾರ ನಗರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಿದೆ. ಆದ್ದರಿಂದ ಈ ಬಜೆಟ್‌ನಲ್ಲಿ ಬೆಂಗಳೂರಿಗೆ ಹೆಚ್ಚಿನ ಅನುದಾನ ಘೋಷಿಸುವ ನಿರೀಕ್ಷೆಯಿದೆ.
ಕೆಲವೇ ದಿನಗಳಲ್ಲಿ ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳ 369 ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದೆ. ಗೇಟರ್ ಬೆಂಗಳೂರು ಪ್ರಾಧಿಕಾರದ ಅಧ್ಯಕ್ಷರಾಗಿರುವ ಸಿಎಂ ಸಿದ್ದರಾಮಯ್ಯ ಬೆಂಗಳೂರು ನಗರದ ಮೇಲೆ ಹಿಡಿತ ಸಾಧಿಸಲು ನಗರದಲ್ಲಿರುವ ಸಮಸ್ಯೆಗಳನ್ನು ಅರಿತು, ಅವುಗಳ ನಿರ್ವಹಣೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಅನುದಾನ ಹಂಚಿಕೆ ಮಾಡಲಿದ್ದಾರೆ ಎಂದು ಅಂದಾಜಿಸಲಾಗಿದೆ
ರಸ್ತೆ, ಒಳಚರಂಡಿ, ಉದ್ಯಾನವನಗಳ ಅಭಿವೃದ್ಧಿ ಸೇರಿದಂತೆ ಇನ್ನಿತರೆ ಅಭಿವೃದ್ಧಿ ಯೋಜನೆಗಳಿಗಾಗಿ 12 ಸಾವಿರ ಕೋಟಿ ರೂ. ಅನುದಾನ ಮೀಸಲಿಡುವ ಸಾಧ್ಯತೆ ಇದೆ. ಬಿಬಿಎಂಪಿ ಹೆಸರು ಬದಲಿಸಿ ಜಿಬಿಎಯ ಅಡಿಯಲ್ಲಿ 5 ನಗರ ಪಾಲಿಕೆಗಳನ್ನು ರಚಿಸಿ ಸಾರ್ವಜನಿಕರ ಟೀಕೆಗೆ ಗುರಿಯಾಗಿರುವ ಕಾಂಗ್ರೆಸ್ ನಗರದ ಅಭಿವೃದ್ಧಿ ಮಾಡಬೇಕಿದೆ.
ಬೆಂಗಳೂರು ನಗರಾಭಿವೃದ್ಧಿ ಸಚಿವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್. ಬ್ರಾಂಡ್ ಬೆಂಗಳೂರು ಎಂಬ ಘೋಷಣೆ ಅಡಿಯಲ್ಲಿ ಅವರು ನಗರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಮುಂಬೈ, ತಿರುವನಂತಪುರಂ ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಬಿಜೆಪಿ ಗೆದ್ದಿದೆ. ಆದ್ದರಿಂದ ಕಾಂಗ್ರೆಸ್ ಸಿಲಿಕಾನ್ ಸಿಟಿಯ ಅಧಿಕಾರ ಹಿಡಿಯಲು ಬಜೆಟ್‌ನಲ್ಲಿ ಹಲವಾರು ಘೋಷಣೆಗಳನ್ನು ಮಾಡುವ ನಿರೀಕ್ಷೆ ಇದೆ.
ಸಚಿವರು, ಶಾಸಕರು ಸಿದ್ದರಾಮಯ್ಯ ಅವರನ್ನು ಬೆಂಗಳೂರು ನಗರಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಚುನಾವಣೆ ಬಜೆಟ್ ಬಳಿಕ ಇರುವ ಕಾರಣ ಬೆಂಗಳೂರು ನಗರಕ್ಕೆ ಬಂಪರ್ ಕೊಡುಗೆ ಸಿಗುವ ಸಾಧ್ಯತೆ ಇದೆ.

