ಬೆಂಗಳೂರು: ಅನ್ನದಾತರ ಶ್ರೇಯೋಭಿವೃದ್ಧಿಗೆ ದೊಡ್ಡ ಹೆಜ್ಜೆ ಇಟ್ಟಿರುವ ರಾಜ್ಯ ಸರ್ಕಾರ, ಕೃಷಿ ಇತಿಹಾಸದಲ್ಲೇ ಮೊದಲ ಬಾರಿಗೆ ರೈತ ಮಾಲ್ (Raitha Mall) ಸ್ಥಾಪನೆಗೆ ಮುಂದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ದಾಖಲೆಯ 17ನೇ ಬಜೆಟ್ನಲ್ಲಿ ರೈತರಿಗೆ ಒಂದೇ ಸೂರಿನಡಿ ಎಲ್ಲಾ ಸೌಲಭ್ಯ ಒದಗಿಸುವ ಈ ವಿನೂತನ ಯೋಜನೆಯನ್ನು ಘೋಷಿಸಿದ್ದಾರೆ.
ಬಜೆಟ್ನ ಪ್ರಮುಖ ಕೃಷಿ ಹೈಲೈಟ್ಸ್:
ಮಣ್ಣಿನ ಆರೋಗ್ಯಕ್ಕೆ ವಸುಧಾಮೃತ: ಕೃಷಿ ಭೂಮಿಯ ಫಲವತ್ತತೆ ಕಡಿಮೆಯಾಗುತ್ತಿರುವುದನ್ನು ತಡೆಯಲು ಸರ್ಕಾರ ಈ ವಿನೂತನ ಯೋಜನೆ ಜಾರಿಗೆ ತಂದಿದೆ. ಮಣ್ಣಿನ ಗುಣಮಟ್ಟ ಹೆಚ್ಚಿಸಿ, ರೈತರಿಗೆ ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಇದು ಸಹಕಾರಿಯಾಗಲಿದೆ.
AI ತಂತ್ರಜ್ಞಾನದ ರೈತ ಕರೆ ಕೇಂದ್ರ: ಇನ್ಮುಂದೆ ರೈತರ ಸಮಸ್ಯೆಗಳಿಗೆ ಕೃತಕ ಬುದ್ಧಿಮತ್ತೆಯೇ ಉತ್ತರ ನೀಡಲಿದೆ ಬೆಳೆ ಹಾನಿ, ಹವಾಮಾನ ಮುನ್ಸೂಚನೆ ಮತ್ತು ಮಾರುಕಟ್ಟೆ ದರದ ಮಾಹಿತಿಯನ್ನು ತಕ್ಷಣವೇ ನೀಡಲು AI ಆಧಾರಿತ ರೈತ ಕರೆ ಕೇಂದ್ರ ಸ್ಥಾಪಿಸಲಾಗುತ್ತಿದೆ.
ಸಿರಿಧಾನ್ಯಕ್ಕೆ ಮಿಲೆಟ್ ಹಬ್: ಸಿರಿಧಾನ್ಯಗಳ ಉತ್ಪಾದನೆ ಮತ್ತು ರಫ್ತಿಗೆ ಉತ್ತೇಜನ ನೀಡಲು ಪ್ರತ್ಯೇಕವಾದ ಮಿಲೆಟ್ ಹಬ್ ನಿರ್ಮಾಣವಾಗಲಿದೆ.
₹100 ಕೋಟಿಯ ಸಿಎಂ ಕೃಷಿ ವಿಸ್ತಾರ ಯೋಜನೆ’: ರಾಜ್ಯಾದ್ಯಂತ ಕೃಷಿ ತಂತ್ರಜ್ಞಾನ ಮತ್ತು ಸೌಲಭ್ಯಗಳನ್ನು ತಲುಪಿಸಲು ₹100 ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.
ಸಸ್ಯ ಸಂಜೀವಿನಿ ಯೋಜನೆ: ಪರಿಸರ ರಕ್ಷಣೆ ಮತ್ತು ಕೃಷಿ ಅರಣ್ಯ ಪ್ರೋತ್ಸಾಹಿಸಲು ಮುಂದಿನ 3 ವರ್ಷಗಳ ಕಾಲ ಗಿಡ-ಮರಗಳ ಪೋಷಣೆಗಾಗಿ ಈ ಯೋಜನೆ ಜಾರಿಯಾಗಲಿದೆ.
ರೈತ ಮಾಲ್ನ ವಿಶೇಷತೆಗಳೇನು?
ಒಂದೇ ಸೂರಿನಡಿ ಎಲ್ಲವೂ: ಬಿತ್ತನೆ ಬೀಜ ರಸಗೊಬ್ಬರ ಕೃಷಿ ಉಪಕರಣಗಳು ಹಾಗೂ ಸುಧಾರಿತ ತಂತ್ರಜ್ಞಾನದ ಮಾಹಿತಿ ಸೇರಿದಂತೆ ರೈತರಿಗೆ ಬೇಕಾದ ಎಲ್ಲಾ ಕೃಷಿ ಉತ್ಪನ್ನಗಳು ಇನ್ಮುಂದೆ ಈ ಮಾಲ್ನಲ್ಲಿ ಲಭ್ಯವಿರುತ್ತವೆ.
MSIL ಮೂಲಕ ನಿರ್ವಹಣೆ: ರಾಜ್ಯದ ನಂಬಿಕಸ್ಥ ಸಂಸ್ಥೆಯಾದ MSIL (Mysore Sales International Limited) ಮೂಲಕ ಈ ಕೃಷಿ ಮಾಲ್ಗಳನ್ನು ಸ್ಥಾಪಿಸಿ, ನಿರ್ವಹಣೆ ಮಾಡಲು ಸರ್ಕಾರ ನಿರ್ಧರಿಸಿದೆ.
ಕೋಲಾರದಲ್ಲಿ ಮೊದಲ ಪ್ರಯೋಗ: ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಮೊದಲ ಹಂತದಲ್ಲಿ ಕೋಲಾರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ (Pilot Project) ಆರಂಭಿಸಲಾಗುತ್ತಿದೆ. ಇದು ಯಶಸ್ವಿಯಾದ ನಂತರ ರಾಜ್ಯದಾದ್ಯಂತ ವಿಸ್ತರಿಸಲು ಸರ್ಕಾರ ಪ್ಲಾನ್ ಮಾಡಿದೆ.
ಮಧ್ಯವರ್ತಿಗಳ ಕಾಟಕ್ಕೆ ಬ್ರೇಕ್: ಗುಣಮಟ್ಟದ ಕೃಷಿ ಉತ್ಪನ್ನಗಳು ನೇರವಾಗಿ ಸರ್ಕಾರಿ ಸಂಸ್ಥೆಯ ಮೂಲಕ ಸಿಗುವುದರಿಂದ ರೈತರು ಖಾಸಗಿ ಅಂಗಡಿಗಳು ಅಥವಾ ಮಧ್ಯವರ್ತಿಗಳ ಮೇಲೆ ಅವಲಂಬಿತರಾಗುವುದು ತಪ್ಪಲಿದೆ.

