ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಯಾವುದೇ ಕ್ಷಣದಲ್ಲಿ ದೆಹಲಿಗೆ ಬರುವಂತೆ ಹೈಕಮಾಂಡ್ ನಾಯಕರಿಂದ ಬುಲಾವ್ ಬರುವ ಸಾಧ್ಯತೆ ಇದೆ. ರಾಜ್ಯಾಧ್ಯಕ್ಷರ ಬದಲಾವಣೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲಿಯೇ ವಿಜಯೇಂದ್ರ ದೆಹಲಿ ಪ್ರವಾಸ ಕೈಗೊಳ್ಳಬೇಕಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ತಯಾರಿ ಆರಂಭವಾಗಿದೆ. ಆದ್ದರಿಂದ ಎಲ್ಲಾ ರಾಜ್ಯಗಳ ಬಿಜೆಪಿ ಅಧ್ಯಕ್ಷರನ್ನು ಜನವರಿ 15ರ ನಂತರ ದೆಹಲಿಗೆ ಕರೆಸಲಾಗುತ್ತಿದೆ. ಜನವರಿ 18 ರಿಂದ 20ರೊಳಗೆ ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರ ಹೆಸರು ಘೋಷಣೆಯಾಗಲಿದೆ.
ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ರಾಜ್ಯದ ಆಂತರಿಕ ಚುನಾವಣೆ ನಡೆದಿದ್ದು, ರಾಜ್ಯಾಧ್ಯಕ್ಷರ ಆಯ್ಕೆಯಾಗಿದೆ. 37 ರಾಜ್ಯಗಳ ಪೈಕಿ 29 ರಾಜ್ಯಗಳಲ್ಲಿ ಚುನಾವಣೆ ಮುಗಿದು ಹೋಗಿದೆ. ಉಳಿದ ರಾಜ್ಯಗಳಲ್ಲಿ ಈಗಿರುವ ಅಧ್ಯಕ್ಷರನ್ನೇ ಮುಂದುವರೆಸಲಾಗುತ್ತದೆ? ಎಂಬ ಸುದ್ದಿ ಇದೆ. ಈ ರಾಜ್ಯಗಳಲ್ಲಿ ಕರ್ನಾಟಕವು ಸೇರಿದೆ.
ನಿತಿನ್ ನಬಿನ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗುವುದು ಖಚಿತ ಎಂಬ ಮಾಹಿತಿ ಇದೆ. ರಾಜ್ಯಗಳ ಬಿಜೆಪಿ ಅಧ್ಯಕ್ಷರು ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೆ ನಿತಿನ್ ನಬಿನ್ ಬೆಂಬಲಿಸಿ ಒಂದು ಸೆಟ್ಟ ನಾಮಪತ್ರ ಸಲ್ಲಿಸಬೇಕಿದೆ. ಬಿಜೆಪಿ ರಾಷ್ಟ್ರೀಯ ಮಂಡಳಿ ಸದಸ್ಯರು ಮತ್ತೊಂದು ಸೆಟ್ ನಾಮಪತ್ರ ಸಲ್ಲಿಕೆ ಮಾಡುತ್ತಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಕೆ.ಲಕ್ಷ್ಮಣ್ ಚುನಾವಣಾಧಿಕಾರಿಯಾಗಿದ್ದಾರೆ. ನಿತಿನ್ ನಬಿನ್ ಬೆಂಬಲಿಸುವ ನಾಮಪತ್ರಕ್ಕೆ ನರೇಂದ್ರ ಮೋದಿ, ಅಮಿತ್ ಶಾ ಸಹ ಸೂಚಕರಾಗಿ ಸಹಿ ಹಾಕಲಿದ್ದಾರೆ. ಎಲ್ಲಾ ರಾಜ್ಯಗಳ ಬಿಜೆಪಿ ಅಧ್ಯಕ್ಷರು ಸಹ ಚುನಾವಣೆ ಸಮಯದಲ್ಲಿ ದೆಹಲಿಯಲ್ಲಿ ಇರಲಿದ್ದಾರೆ.
ನಾಮಪತ್ರ ಸಲ್ಲಿಕೆ ಮಾಡಿದ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಘೋಷಣೆಯಾಗಲಿದೆ. ಅವಿರೋಧವಾಗಿ ನಿತಿನ್ ನಬಿನ್ ಆಯ್ಕೆಯಾಗಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದೆ. ಬಿಜೆಪಿ ಆಡಳಿತ ಇರುವ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ಬಿಜೆಪಿ ರಾಜ್ಯಾಧ್ಯಕ್ಷರು ಚುನಾವಣೆ ಸಮಯದಲ್ಲಿ ದೆಹಲಿಯಲ್ಲಿ ಇರಬೇಕಿದೆ.
ಈಗಾಗಲೇ 35 ವರ್ಷದ ನಿತಿನ್ ನಬಿನ್ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರು ಜನವರಿ 2026 ರಿಂದ 2029ರ ಜನವರಿ ತನಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ. 2029ರಲ್ಲಿ ಲೋಕಸಭೆ ಚುನಾವಣೆ ಇರುವ ಹಿನ್ನಲೆಯಲ್ಲಿ ಅವರ ಅಧಿಕಾರಾವಧಿಯನ್ನು ಒಂದು ವರ್ಷ ವಿಸ್ತರಣೆ ಸಹ ಮಾಡಬಹುದು.
ನಿತಿನ್ ನಬಿನ್ ಬಿಹಾರ ರಾಜ್ಯದವರು. ಬಂಕಿಪುರ ವಿಧಾನಸಭಾ ಕ್ಷೇತ್ರದಿಂದ 5ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಭಾರತೀಯ ಜನತಾ ಯುವ ಮೋರ್ಚಾದ ರಾಜ್ಯ ಘಟಕದ ಮುಖ್ಯಸ್ಥರಾಗಿದ್ದರು ಮತ್ತು ಛತ್ತೀಸ್‌ಗಢ ರಾಜ್ಯಕ್ಕೆ ಪಕ್ಷದ ಉಸ್ತುವಾರಿಯಾಗಿದ್ದರು.
ಬದಲಾವಣೆ ಇಲ್ಲ: ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಬದಲಾವಣೆ ಮಾಡಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಕೆಲವು ದಿನಗಳ ಹಿಂದೆ ವಿಜಯೇಂದ್ರ ನಿತಿನ್ ನಬಿನ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಸದ್ಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಮಾಡುವುದಿಲ್ಲ ಎಂಬ ಮಾಹಿತಿ ಸಿಕ್ಕಿದೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಎರಡೂವರೆ ವರ್ಷ ಇದೆ. ಈಗ ಗ್ರೆಟರ್ ಬೆಂಗಳೂರು ಅಥಾರಿಟಿ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಎದುರಾಗಲಿವೆ. ಆದ್ದರಿಂದ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಮಾಡುವುದಿಲ್ಲ. ಬಿ.ವೈ.ವಿಜಯೇಂದ್ರ ಅವರನ್ನೇ ಮುಂದುವರೆಸಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

