HomeEntertainmentವಿವಾದಗಳನ್ನೆಲ್ಲ ಮೆಟ್ಟಿ ನಿಂತು ಗಲ್ಲಾಪೆಟ್ಟಿಗೆಯಲ್ಲಿ ಕರಾವಳಿ ಅಬ್ಬರ: 4 ಕೋಟಿ ರೂಪಾಯಿ ಗಳಿಕೆಯತ್ತ ಧಾವಿಸಿದ ಡೈನಾಮಿಕ್...

ವಿವಾದಗಳನ್ನೆಲ್ಲ ಮೆಟ್ಟಿ ನಿಂತು ಗಲ್ಲಾಪೆಟ್ಟಿಗೆಯಲ್ಲಿ ಕರಾವಳಿ ಅಬ್ಬರ: 4 ಕೋಟಿ ರೂಪಾಯಿ ಗಳಿಕೆಯತ್ತ ಧಾವಿಸಿದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಸಿನಿಮಾ

ಬೆಂಗಳೂರು: ಆರಂಭದಲ್ಲಿ ಸಾಧಾರಣ ಪ್ರದರ್ಶನ ಕಂಡು, ಬಳಿಕ ದಿನದಿಂದ ದಿನಕ್ಕೆ ಪ್ರೇಕ್ಷಕರ ಭರಪೂರ ಬೆಂಬಲದೊಂದಿಗೆ ಮುನ್ನುಗ್ಗುತ್ತಿರುವ ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಚಿತ್ರ ‘ಕರಾವಳಿ’ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಗೂ ಮುನ್ನ ಎದುರಾಗಿದ್ದ ವಿವಾದಗಳನ್ನು ಬದಿಗೊತ್ತಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿರುವ ಈ ಸಿನಿಮಾ, ಇದೀಗ ಒಟ್ಟಾರೆ ನಾಲ್ಕು ಕೋಟಿ ರೂಪಾಯಿ ಗಳಿಕೆಯ ಸಮೀಪಕ್ಕೆ ಬಂದು ತಲುಪಿದೆ. ಗುರುದತ್ ಗಾಣಿಗ ನಿರ್ದೇಶನದಲ್ಲಿ, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಈ ಮಣ್ಣಿನ ಸೊಗಡಿನ ಕಂಬಳದ ಹಿನ್ನೆಲೆಯ ಥ್ರಿಲ್ಲರ್ ಸಿನಿಮಾ, ಮಂದಗತಿಯಲ್ಲಿದ್ದ ಕನ್ನಡ ಚಿತ್ರರಂಗಕ್ಕೆ ಹೊಸ ಚೈತನ್ಯ ತುಂಬಿದೆ.

ಜುಲೈ 24 ರಂದು ರಾಜ್ಯಾದ್ಯಂತ 175 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಕರಾವಳಿ ಚಿತ್ರಕ್ಕೆ ಪ್ರೇಕ್ಷಕರ ಭಾರಿ ಬೇಡಿಕೆ ವ್ಯಕ್ತವಾದ ಹಿನ್ನೆಲೆಯಲ್ಲಿ, ಎರಡನೇ ದಿನವೇ ಹೆಚ್ಚುವರಿಯಾಗಿ 25ಕ್ಕೂ ಹೆಚ್ಚು ಸ್ಕ್ರೀನ್‌ಗಳನ್ನು ಸೇರ್ಪಡೆಗೊಳಿಸಲಾಯಿತು.

ಸ್ಯಾಸ್ನಿಲ್ಕ್ ವರದಿ ಪ್ರಕಾರ ಚಿತ್ರದ ದಿನಾವಾರು ಗಳಿಕೆಯ ವಿವರ ಇಲ್ಲಿದೆ:

ಮೊದಲ ದಿನ (ಶುಕ್ರವಾರ): ₹0.68 ಕೋಟಿ (ನೆಟ್ ಕಲೆಕ್ಷನ್)

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎರಡನೇ ದಿನ (ಶನಿವಾರ): ₹1.14 ಕೋಟಿ (ಮೊದಲ ದಿನಕ್ಕಿಂತ ಡಬಲ್ ಗಳಿಕೆ!)

ಮೂರನೇ ದಿನ (ಭಾನುವಾರ): ₹1.64 ಕೋಟಿ

ಒಟ್ಟು ಭಾರತದ ನೆಟ್ ಕಲೆಕ್ಷನ್: ₹3.46 ಕೋಟಿ

ಒಟ್ಟು ಭಾರತದ ಗ್ರಾಸ್ ಕಲೆಕ್ಷನ್: ₹3.88 ಕೋಟಿಗೂ ಅಧಿಕ

ಟಿಕೆಟ್ ಬುಕಿಂಗ್ ಆಪ್ ಬುಕ್ ಮೈ ಶೋ’ನಲ್ಲಿ ಶನಿವಾರದಂದು ಪ್ರತಿ ಗಂಟೆಗೆ 2,000ಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗಿರುವುದು ಚಿತ್ರಕ್ಕಿರುವ ಕ್ರೇಜ್‌ಗೆ ಸಾಕ್ಷಿಯಾಗಿದೆ. ಲವ್ ಮಾಕ್‌ಟೇಲ್ 3 ಮತ್ತು ‘KD’ ಸಿನಿಮಾಗಳ ಸಾಲಿಗೆ ಈಗ ಕರಾವಳಿ ಕೂಡ ಸೇರ್ಪಡೆಯಾಗಿದೆ.

ಸಿನಿಮಾ ಬಿಡುಗಡೆಗೂ ಮುನ್ನ ಟ್ರೈಲರ್ ಲಾಂಚ್ ವೇಳೆ ಪ್ರಜ್ವಲ್ ದೇವರಾಜ್ ಗೈರುಹಾಜರಿ, ಸಂಭಾವನೆ ಬಾಕಿ ಹಾಗೂ ಅವರ ಧ್ವನಿಗೆ ಬೇರೆ ಕಲಾವಿದರಿಂದ ಡಬ್ಬಿಂಗ್ ಮಾಡಿಸಿದ ವಿಚಾರವಾಗಿ ಅಭಿಮಾನಿಗಳಿಂದ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಆದರೆ, ಪ್ರಜ್ವಲ್ ದೇವರಾಜ್, ರಾಜ್ ಬಿ. ಶೆಟ್ಟಿ, ಮಿತ್ರ ಹಾಗೂ ರಮೇಶ್ ಇಂದಿರ ಅವರ ಅದ್ಭುತ ನಟನೆ ಮತ್ತು ನಿರ್ದೇಶನದ ಶ್ರೇಷ್ಠತೆಯಿಂದ ಸಿನಿಮಾ ಎಲ್ಲ ವಿವಾದಗಳನ್ನು ಮೆಟ್ಟಿ ನಿಂತು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.

ಕರಾವಳಿ ಭಾಗದಲ್ಲಿ ಶೇ. 40ರಷ್ಟು ಕಲೆಕ್ಷನ್

ಮೊದಲ ದಿನದ ಒಟ್ಟು ಕಲೆಕ್ಷನ್‌ನಲ್ಲಿ ಶೇಕಡಾ 40ರಷ್ಟು ಪಾಲು ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಿಂದಲೇ ಬಂದಿದೆ. ಕರಾವಳಿಯ ಅಪ್ಪಟ ವಾತಾವರಣ, ಸಾಂಸ್ಕೃತಿಕ ಅಸ್ಮಿತೆ ಮತ್ತು ಅದ್ಧೂರಿ ಮೇಕಿಂಗ್‌ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

ಮೈಸೂರು, ಹುಬ್ಬಳ್ಳಿ ಭಾಗದಲ್ಲೂ ಸಿನಿಮಾ ಸ್ಥಿರವಾದ ಕಲೆಕ್ಷನ್ ಮಾಡುತ್ತಿದ್ದರೆ, ಬೆಂಗಳೂರಿನ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಲೇಟ್ ನೈಟ್ ಮತ್ತು ಬೆಳಗಿನ ಶೋಗಳಿಗೆ ಕುಟುಂಬ ಸಮೇತ ಪ್ರೇಕ್ಷಕರು ಹರಿದು ಬರುತ್ತಿದ್ದಾರೆ.

ಪರಭಾಷೆಯಲ್ಲೂ ಹೆಚ್ಚಿದ ಬೇಡಿಕೆ

ಸದ್ಯ ಕರ್ನಾಟಕದಲ್ಲಿ ಮಾತ್ರ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿರುವ ‘ಕರಾವಳಿ’ ಚಿತ್ರಕ್ಕೆ ನೆರೆರಾಜ್ಯಗಳಲ್ಲೂ ಭಾರಿ ಡಿಮ್ಯಾಂಡ್ ಸೃಷ್ಟಿಯಾಗಿದೆ. ಹೀಗಾಗಿ ಮುಂದಿನ ವಾರ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೂ ಡಬ್ ಆಗಿ ಬಿಡುಗಡೆಯಾಗುವ ಸಾಧ್ಯತೆಗಳು ದಟ್ಟವಾಗಿವೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular