ಸ್ಯಾಂಡಲ್ವುಡ್ನಲ್ಲಿ ಸದ್ಯಕ್ಕೆ ಎಲ್ಲರ ಕಣ್ಣು ಕರಾವಳಿ ಚಿತ್ರದ ಮೇಲೆಯೇ ನೆಟ್ಟಿದೆ. ಜುಲೈ 24 ರಂದು ರಾಜ್ಯಾದ್ಯಂತ ಬರೊಬ್ಬರಿ 175ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಗ್ರ್ಯಾಂಡ್ ಆಗಿ ತೆರೆಕಂಡಿದ್ದ ಈ ಸಿನಿಮಾ, ಈಗ ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಬರೆಯುವತ್ತ ಹೆಜ್ಜೆ ಇಟ್ಟಿದೆ. ಪ್ರೇಕ್ಷಕರಿಂದ ಸಿಗುತ್ತಿರುವ ನಿರೀಕ್ಷೆಗೂ ಮೀರಿದ ಬೆಂಬಲ ಕಂಡು ಪ್ರದರ್ಶನಗಳ ಸಂಖ್ಯೆಯನ್ನು ದಿನದಿಂದ ದಿನಕ್ಕೆ ಹೆಚ್ಚಿಸಲಾಗುತ್ತಿದೆ.
ಮೊದಲ ದಿನವೇ ಕಮಾಲ್ ಈಗ 6 ಕೋಟಿ ಕ್ಲಬ್ ರಿಲೀಸ್ ಆದ ಮೊದಲ ದಿನವೇ ₹1 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಶುಭಾರಂಭ ಕಂಡಿದ್ದ ಕರಾವಳಿ ಈಗ ಒಟ್ಟಾರೆಯಾಗಿ ₹6 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ ಎಂಬ ಬಿಸಿಬಿಸಿ ಮಾಹಿತಿ ಗಾಂಧಿನಗರದ ಪಂಡಿತರಿಂದ ಸಿಕ್ಕಿದೆ. ಪ್ರಸ್ತುತ ಕನ್ನಡ ಚಿತ್ರರಂಗ ಎದುರಿಸುತ್ತಿರುವ ಕಠಿಣ ಪರಿಸ್ಥಿತಿಯಲ್ಲಿ ಈ ಮಟ್ಟದ ಕಲೆಕ್ಷನ್ ನಿಜಕ್ಕೂ ಸ್ಯಾಂಡಲ್ವುಡ್ಗೆ ಹೊಸ ಚೈತನ್ಯ ತಂದಿದೆ. ಅಷ್ಟೇ ಅಲ್ಲ, ಈ ವರ್ಷ ಅತ್ಯುತ್ತಮ ಓಪನಿಂಗ್ ಪಡೆದ ಶ್ರೇಷ್ಠ ಕನ್ನಡ ಸಿನಿಮಾಗಳ ಪಟ್ಟಿಗೆ ಕರಾವಳಿ ಸೇರಿಕೊಂಡಿದೆ.
6 ದಿನಕ್ಕೆ 5 ಲಕ್ಷ ಮಂದಿ ವೀಕ್ಷಣೆ
ಚಿತ್ರಮಂದಿರಗಳತ್ತ ಹರಿದು ಬರುತ್ತಿರುವ ಪ್ರೇಕ್ಷಕರ ಮಹಾಪೂರ ನಿಲ್ಲುತ್ತಲೇ ಇಲ್ಲ. ಬಿಡುಗಡೆಯಾದ ಕೇವಲ 6 ದಿನಗಳಲ್ಲೇ 5 ಲಕ್ಷಕ್ಕೂ ಹೆಚ್ಚು ಜನರು ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸಿದ್ದಾರೆ ಎಂದು ಚಿತ್ರತಂಡ ಅಧಿಕೃತವಾಗಿ ಹಂಚಿಕೊಂಡಿದೆ.
ಪರಭಾಷೆಯಲ್ಲೂ ಡಿಮ್ಯಾಂಡ್: ಶೀಘ್ರದಲ್ಲೇ ಡಬ್ಬಿಂಗ್ ಕೇವಲ ಕರ್ನಾಟಕದಲ್ಲಷ್ಟೇ ಅಲ್ಲದೆ, ಗಡಿಯಾಚೆಗೂ ಕರಾವಳಿಯ ಅಲೆ ತಲುಪಿದೆ. ಪ್ರೇಕ್ಷಕರ ಈ ಅಭೂತಪೂರ್ವ ಪ್ರೀತಿಗೆ ಮನಸೋತಿರುವ ಪರಭಾಷಾ ವಿತರಕರು ಸಿನಿಮಾಗಾಗಿ ಕ್ಯೂ ನಿಂತಿದ್ದಾರೆ. ಹೀಗಾಗಿ ಶೀಘ್ರದಲ್ಲೇ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೂ ಚಿತ್ರ ಡಬ್ ಆಗಿ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ ಎಂದು ಚಿತ್ರತಂಡದ ನಿಕಟ ಮೂಲಗಳು ತಿಳಿಸಿವೆ.

