HomeKarnatakaಮತ್ತೊಂದು ಸಹಕಾರಿ ಬ್ಯಾಂಕ್ ನಿಂದ ಗೋಲ್ ಮಾಲ್: 60ಕ್ಕೂ ಹೆಚ್ಚು ರೈತರ ನಕಲಿ ದಾಖಲೆ ಸೃಷ್ಟಿಸಿ...

ಮತ್ತೊಂದು ಸಹಕಾರಿ ಬ್ಯಾಂಕ್ ನಿಂದ ಗೋಲ್ ಮಾಲ್: 60ಕ್ಕೂ ಹೆಚ್ಚು ರೈತರ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂಪಾಯಿ ವಂಚನೆ

ಕಾರವಾರ: ಸಹಕಾರಿ ಬ್ಯಾಂಕ್ ವೊಂದು ರೈತರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕೃಷಿ ಸಾಲದ ಹೆಸರಲ್ಲಿ ಕೋಟಿ ಕೋಟಿ ಹಣ ವಂಚಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ದಾಸನಕೊಪ್ಪದಲ್ಲಿ ನಡೆದಿದೆ.

ದಾಸನಕೊಪ್ಪದ ಕಾಳಂಗಿ ಸಹಕಾರಿ ಬ್ಯಾಂಕ್‌ನಲ್ಲಿ ಈ ಗೋಲ್‌ಮಾಲ್ ನಡೆದಿದ್ದು, ವಂಚನೆಗೆ ಒಳಗಾದ ರೈತರು ಮತ್ತು ಷೇರುದಾರರು ಬ್ಯಾಂಕ್‌ಗೆ ಮುತ್ತಿಗೆ ಹಾಕಿ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಳಂಗಿ ಸಹಕಾರಿ ಬ್ಯಾಂಕ್‌ನಲ್ಲಿ ಎರಡು ಸಾವಿರಕ್ಕೂ ಹೆಚ್ಚು ರೈತರು ಸದಸ್ಯರಾಗಿದ್ದು, ತಮ್ಮ ಕೃಷಿ ಆದಾಯ ಹಾಗೂ ಠೇವಣಿಗಳನ್ನು ಇಲ್ಲಿ ಇಡುತ್ತಿದ್ದರು. ರೈತರು ಪ್ರತಿ ವರ್ಷ ಬೆಳೆ ಸಾಲ ಪಡೆದು, ಫಸಲು ಬಂದ ನಂತರ ಪ್ರಾಮಾಣಿಕವಾಗಿ ಮರುಪಾವತಿಸಿ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆಯುತ್ತಿದ್ದರು. ಆದರೆ, ಇತ್ತೀಚೆಗೆ ಸಾಲ ಪಡೆಯಲು ಹೋದ 60ಕ್ಕೂ ಹೆಚ್ಚು ರೈತರಿಗೆ ಬ್ಯಾಂಕ್ ಸಿಬ್ಬಂದಿ ನಿಮ್ಮ ಹಳೆಯ ಸಾಲ ಬಾಕಿ ಇದೆ ಎಂದು ಹೇಳಿದ್ದಾರೆ. ರೈತರಿಗೆ ಅವರು ಪಡೆದ ಸಾಲದ ದುಪ್ಪಟ್ಟು ಹಣ ಕಟ್ಟುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಸಾಲ ಮರುಪಾವತಿ ಮಾಡಿದರೂ ಸಾಲ ಬಾಕಿ ಇದೆ ಎಂದು ಹೇಳುತ್ತಿರುವ ಬ್ಯಾಂಕ್ ಸಿಬ್ಬಂದಿ ನಡೆಗೆ ರೈತರು ಕಂಗಾಲಾಗಿದ್ದಾರೆ.

ನೊಂದ ರೈತರು ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ನಡೆಸಿದಾಗ, ರೈತರು ಸಾಲಕ್ಕಾಗಿ ನೀಡಿದ್ದ ದಾಖಲೆಗಳನ್ನು ಬಳಸಿ ಅವರ ಖಾತೆಯಿಂದ ಕೋಟ್ಯಂತರ ರೂಪಾಯಿಗಳನ್ನು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಆರ್‌ಟಿಜಿಎಸ್ ಮಾಡಿ ಡ್ರಾ ಮಾಡಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದರೊಂದಿಗೆ ಬ್ಯಾಂಕ್‌ಗೆ ಸೇರಿದ 69 ಲಕ್ಷ ರೂಪಾಯಿ ಹಣವನ್ನು ಹಾನಗಲ್ ಮೂಲದ ವ್ಯಕ್ತಿಯೊಬ್ಬನಿಗೆ ಬಡ್ಡಿ ವ್ಯವಹಾರಕ್ಕಾಗಿ ವರ್ಗಾಯಿಸಲಾಗಿದೆ ಎಂದು ಷೇರುದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬ್ಯಾಂಕ್‌ನಲ್ಲಿ ನಡೆದ ಹಗರಣದಿಂದ ಆತಂಕಗೊಂಡ ಗ್ರಾಹಕರು ತಾವು ಇಟ್ಟಿದ್ದ ಲಕ್ಷಾಂತರ ರೂಪಾಯಿ ಠೇವಣಿ ಹಣವನ್ನು ಹಿಂಪಡೆಯಲು ಹೋದರೆ ಬ್ಯಾಂಕ್‌ನಲ್ಲಿ ಹಣವೇ ಇಲ್ಲ ಎನ್ನುವ ಬೇಜವಾಬ್ದಾರಿಯ ಉತ್ತರ. ಬ್ಯಾಂಕ್ ಕಾರ್ಯದರ್ಶಿ ಸುನೀಲ್ ಬಸವರಾಜ್ ಗೌಡ ನಕಲಿ ದಾಖಲೆ ಸೃಷ್ಟಿಸಿ ಕನಿಷ್ಠ 25 ಲಕ್ಷಕ್ಕೂ ಹೆಚ್ಚು ಹಣ ದುರುಪಯೋಗಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಆದರೆ ಆಡಳಿತ ಮಂಡಳಿಯ 12 ಜನ ಕಮಿಟಿ ಸದಸ್ಯರ ಅನುಮತಿ ಇಲ್ಲದೆ ಇಷ್ಟೊಂದು ದೊಡ್ಡ ಮಟ್ಟದ ಸಾಲ ಮಂಜೂರಾಗಲು ಸಾಧ್ಯವಿಲ್ಲ ಎನ್ನುವುದು ಸಂತ್ರಸ್ತರ ವಾದವಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಸಹಕಾರಿ ಇಲಾಖೆಯ ಉಪ ನಿಬಂಧಕರಾದ ತೇಜಸ್ವಿನಿ, ಕಾರ್ಯದರ್ಶಿ ಹಣ ದುರುಪಯೋಗಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಜಿಲ್ಲಾ ಸಹಕಾರಿ ಸಂಘಗಳ ಜಂಟಿ ನಿಬಂಧಕರು ತನಿಖೆ ನಡೆಸಿ ವರದಿ ಬಂದ ಬಳಿಕ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ಭರವಸೆ ನೀಡಿದ್ದಾರೆ.

ಮತ್ತೊಂದೆಡೆ ಬ್ಯಾಂಕ್ ವಂಚನೆಗೆ ಕಂಗಾಲಾಗಿರುವ ರೈತರು ಬ್ಯಾಂಕ್ ಬಳಿ ಪ್ರತಿಭಟನೆ ನಡೆಸುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular