ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಆರೋಪ ಕೇಳಿಬಂದಿದೆ. ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಈ ಕೃತ್ಯಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.
ವಿಶ್ವವಿದ್ಯಾಲಯದ ಇತಿಹಾಸ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ರಾತ್ರಿ ಕ್ಯಾಂಪಸ್‌ನಲ್ಲಿ ವಾಕಿಂಗ್ ಮಾಡುತ್ತಿದ್ದ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ. ಈ ವೇಳೆ ಕಟ್ಟಡ ಕಾರ್ಮಿಕನೊಬ್ಬ ವಿದ್ಯಾರ್ಥಿನಿಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಘಟನೆಯ ಬಳಿಕ ವಿದ್ಯಾರ್ಥಿನಿ ತನ್ನ ಸ್ನೇಹಿತರಿಗೆ ವಿಚಾರ ತಿಳಿಸಿದ್ದು, ವಿಷಯ ತಿಳಿಯುತ್ತಿದ್ದಂತೆ ವಿದ್ಯಾರ್ಥಿಗಳಲ್ಲಿ ಆತಂಕ ಹಾಗೂ ಆಕ್ರೋಶ ವ್ಯಕ್ತವಾಗಿದೆ.
ಘಟನೆಯನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ವಿಶ್ವವಿದ್ಯಾಲಯದ ಮುಖ್ಯದ್ವಾರದ ಬಳಿ ಪ್ರತಿಭಟನೆ ನಡೆಸಿದರು. ರಾತ್ರಿ 2 ಗಂಟೆಯವರೆಗೂ ಪ್ರತಿಭಟನೆ ಮುಂದುವರಿದಿದ್ದು, ಕ್ಯಾಂಪಸ್‌ನ ಭದ್ರತಾ ವೈಫಲ್ಯದ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿನಿ ಸುರಕ್ಷತೆ ಕುರಿತು ವಿಶ್ವವಿದ್ಯಾಲಯ ಆಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಕ್ಯಾಂಪಸ್‌ನಲ್ಲಿ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಘಟನೆಯ ಮಾಹಿತಿ ತಿಳಿದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಡ್ಡೂರು ಅವರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡ ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಅರಣ್ಯ ರಕ್ಷಣೆ ನಮ್ಮೆಲ್ಲರ ಹೊಣೆ: ಜಿಲ್ಲಾ ನ್ಯಾಯಾಧೀಶ ಸಿದ್ದಲಿಂಗ ಪ್ರಭು
ಬಳ್ಳಾರಿ : ಅರಣ್ಯ ಮತ್ತು ವನ್ಯಜೀವಿಗಳನ್ನು ರಕ್ಷಿಸುತ್ತೇವೆ, ಅದನ್ನು ನಾಶ ಮಾಡಲು ಬಿಡುವುದಿಲ್ಲ ಎಂಬ ಪ್ರತಿಜ್ಞೆಯನ್ನು ನಾವೆಲ್ಲರೂ ಸ್ವೀಕರಿಸಬೇಕು. ಆಗ ಮಾತ್ರ ಪ್ರಕೃತಿ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದ ಅರಣ್ಯ ಹುತಾತ್ಮರ ಬಲಿದಾನಕ್ಕೆ ಸೂಕ್ತ ಸಾರ್ಥಕತೆ ದೊರೆಯುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಸಿದ್ಧಲಿಂಗ ಪ್ರಭು ಅವರು ಹೇಳಿದರು.
ಶುಕ್ರವಾರ ನಗರದ ಅರಣ್ಯ ಇಲಾಖೆ ಕಚೇರಿಯಲ್ಲಿ ಆಯೋಜಿಸಿದ್ದ ‘ಅರಣ್ಯ ಹುತಾತ್ಮರ ದಿನಾಚರಣೆ’ಯಲ್ಲಿ ಭಾಗವಹಿಸಿ, ಹುತಾತ್ಮ ಸ್ಮಾರಕಕ್ಕೆ ಪುಷ್ಪಗುಚ್ಛ ನಮಸ್ಕರಿಸಿ ಅವರು ಮಾತನಾಡಿದರು.
ಅರಣ್ಯ ಯೋಧರಿಂದಾಗಿ ಇಂದಿಗೂ ಪ್ರಕೃತಿಯ ಜೀವಸಂಕುಲಗಳಿಗೆ ಸೂಕ್ತ ಆಶ್ರಯ ಸಿಕ್ಕಿದೆ. ಪರಿಸರದ ಸಮತೋಲನ ಕಾಯ್ದುಕೊಳ್ಳಲು ಕಾಡಿನ ರಕ್ಷಣೆ ಅತ್ಯಗತ್ಯ ಎಂದು ಅವರು ಹೇಳಿದರು.ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಮಾತನಾಡಿ, ಅರಣ್ಯದಲ್ಲಿ ಕಾರ್ಯನಿರ್ವಹಿಸುವುದು ಸವಾಲಿನ ಕೆಲಸ. ಬೇಟೆಗಾರರು ಹಾಗೂ ಕಾಡುಗಳ್ಳರ ವಿರುದ್ಧ ಹೋರಾಡುವ ಅರಣ್ಯ ಸಿಬ್ಬಂದಿಗೆ ಸಾರ್ವಜನಿಕರು ಮತ್ತು ಪರಿಸರ ಪ್ರಿಯರು ಬೆಂಬಲವಾಗಿ ನಿಲ್ಲಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಬಳ್ಳಾರಿ ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಎನ್. ಬಸವರಾಜ್ ಅವರು ಮಾತನಾಡಿ, ದೇಶ ಹಾಗೂ ರಾಜ್ಯದಲ್ಲಿ ಒಟ್ಟು 65 ಅರಣ್ಯ ಸಿಬ್ಬಂದಿ ಕರ್ತವ್ಯದ ವೇಳೆ ಹುತಾತ್ಮರಾಗಿದ್ದಾರೆ. ಕಳೆದ 25 ವರ್ಷಗಳಲ್ಲಿ ವನ್ಯಜೀವಿ-ಮಾನವ ಸಂಘರ್ಷ ಹೆಚ್ಚುತ್ತಿದ್ದು, ಸಿಬ್ಬಂದಿ ಕರ್ತವ್ಯದ ಜೊತೆಗೆ ತಮ್ಮ ಕುಟುಂಬಕ್ಕೂ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಅವರು ಮಾತನಾಡಿ, ಅರಣ್ಯವನ್ನು ಸಂರಕ್ಷಿಸಿದರೆ ಮಾತ್ರ ಮಾನವ ಕುಲದ ಜೀವನ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಹುತಾತ್ಮರಿಗೆ ಗೌರವ:
ಮೃತರಾದ ಅರಣ್ಯ ಯೋಧರ ಸ್ಮರಣಾರ್ಥ ಪೊಲೀಸ್ ಸಿಬ್ಬಂದಿ ಕುಶಾಲುತೋಪು ಹಾರಿಸಿ, ಬಳಿಕ ಎರಡು ನಿಮಿಷಗಳ ಮೌನಾಚರಣೆ ಮೂಲಕ ಗೌರವ ಸಲ್ಲಿಸಿದರು.ಈ ವೇಳೆ ಸಾಮಾಜಿಕ ಅರಣ್ಯ ಉಪ ಸಂರಕ್ಷಣಾಧಿಕಾರಿ ಮಾರ್ಕಾಂಡೇಯ, ಸಂತೋಷ್ ನಾಯಕ್ ಸೇರಿದಂತೆ ಇಲಾಖೆಯ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು. ಎಆರ್‌ಎಫ್‌ಒ ಪ್ರಾಣೇಶ್ ಕಾರ್ಯಕ್ರಮ ನಿರೂಪಿಸಿದರು.

