ಚಿತ್ರರಂಗದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ನಟಿ ಕಾಜಲ್ ಅಗರ್ವಾಲ್ ಅವರ ಪ್ರಮುಖ ಪಾತ್ರವಿರುವ ಸಾಮಾಜಿಕ ಕಥಾಹಂದರದ ‘ದಿ ಇಂಡಿಯಾ ಸ್ಟೋರಿ’ ಸಿನಿಮಾ ನಿನ್ನೆ ಬೆಳ್ಳಿತೆರೆಗೆ ಬಂದಿದೆ. ಕೃಷಿಯಲ್ಲಿ ಕ್ರಿಮಿನಾಶಕಗಳ ಬಳಕೆಯಿಂದ ಉಂಟಾಗುವ ಭೀಕರ ಪರಿಣಾಮಗಳ ಕುರಿತು ಬೆಳಕು ಚೆಲ್ಲುವ ಉದ್ದೇಶದಿಂದ ರೂಪುಗೊಂಡಿದ್ದ ಈ ಚಿತ್ರಕ್ಕೆ ಚಿತ್ರಮಂದಿರಗಳಲ್ಲಿ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ. ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನದ ಗಳಿಕೆ ತೀರಾ ನೀರಸವಾಗಿದ್ದು, ಚಲನಚಿತ್ರ ರಂಗದ ವಿಶ್ಲೇಷಕರಿಗೆ ತೀವ್ರ ಆಶ್ಚರ್ಯ ಮೂಡಿಸಿದೆ.
ಸಿನಿಮಾ ವಹಿವಾಟು ಕುರಿತು ಮಾಹಿತಿ ನೀಡುವ ಸ್ಯಾಕ್ನಿಲ್ಕ್ ವರದಿಯ ಪ್ರಕಾರ, ಈ ಚಿತ್ರದ ಹಿಂದಿ ಅವೃತ್ತಿಯು ದೇಶಾದ್ಯಂತ ಮೊದಲ ದಿನ ಗಳಿಸಿದ್ದು ಕೇವಲ 16 ಲಕ್ಷ ರೂಪಾಯಿ ನಿವ್ವಳ ಮೊತ್ತ ಮಾತ್ರ. ಸರಿಸುಮಾರು 20 ರಿಂದ 30 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ ಎನ್ನಲಾದ ಈ ಚಿತ್ರಕ್ಕೆ ಈ ಮಟ್ಟದ ಕನಿಷ್ಠ ಆರಂಭ ದೊರೆತಿರುವುದು ದೊಡ್ಡ ಮಟ್ಟದ ನಷ್ಟದ ಮುನ್ಸೂಚನೆ ನೀಡಿದೆ. ಆನ್‌ಲೈನ್ ಟಿಕೆಟ್ ಬುಕಿಂಗ್ ವೇದಿಕೆಗಳಲ್ಲೂ ಈ ಚಿತ್ರದ ಬಗ್ಗೆ ಪ್ರೇಕ್ಷಕರು ಹೆಚ್ಚಿನ ಆಸಕ್ತಿ ತೋರಿಸದಿರುವುದು ಎದ್ದು ಕಾಣುತ್ತಿದೆ.
ಚಿತ್ರದ ಬಿಡುಗಡೆಗೆ ಮುನ್ನ ಯಾವುದೇ ರೀತಿಯ ದೊಡ್ಡ ಮಟ್ಟದ ಪ್ರಚಾರ ನಡೆಯದಿರುವುದು ಹಾಗೂ ಸಾರ್ವಜನಿಕರಲ್ಲಿ ಈ ಬಗ್ಗೆ ಕನಿಷ್ಠ ಅರಿವು ಕೂಡ ಇಲ್ಲದಿರುವುದು ಈ ಸೋಲಿಗೆ ಮುಖ್ಯ ಕಾರಣ ಎನ್ನಲಾಗಿದೆ. ಇನ್ನು ಚಿತ್ರಮಂದಿರಗಳತ್ತ ಪ್ರೇಕ್ಷಕರನ್ನು ಸೆಳೆಯುವಲ್ಲಿಯೂ ಸಿನಿಮಾ ವಿಫಲವಾಗಿದೆ. ಇಷ್ಟೇ ಅಲ್ಲದೆ, ಪ್ರಾದೇಶಿಕ ಭಾಷೆಗಳಾದ ತೆಲುಗು ಮತ್ತು ತಮಿಳು ಆವೃತ್ತಿಗಳ ಬಿಡುಗಡೆಗೆ ಸೆನ್ಸಾರ್ ಮಂಡಳಿಯಿಂದ ಅನುಮತಿ ಸಿಗದೆ ತಡೆಯುಂಟಾಗಿದೆ. ಚೇತನ್ ಡಿ.ಕೆ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ನಟ ಶ್ರೇಯಸ್ ತಲ್ಪಡೆ ಕೂಡ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

