ಮೈಸೂರು: ರಾಜ್ಯಾದ್ಯಂತ ರಣ ಬಿಸಿಲು ಹೆಚ್ಚುತ್ತಿದ್ದು, ಸೆಖೆಯಿಂದ ರಕ್ಷಿಸಿಕೊಳ್ಳಲು ಜನರು ನದಿ, ಹಳ್ಳ, ಕೆರೆಗಳಲ್ಲಿ ಈಜಲು ಹೋಗುತ್ತಿದ್ದಾರೆ. ಹೀಗೆ ಈಜಲು ಹೋದ ಅರಣ್ಯ ರಕ್ಷಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯ ಹಿನ್ನೀರಿನಲ್ಲಿ ಈಜಲು ಹೋಗಿ ಫಾರೆಸ್ಟ್ ರೇಂಜರ್ ಓರ್ವರು ಮೃತಪಟ್ಟಿದ್ದಾರೆ. ಹೆಚ್. ಡಿ. ಕೋಟೆ ತಾಲೂಕಿನ ಅಂಕನಾಥಪುರ ಗ್ರಾಮದ ಸುಪ್ರೀತ್ (36) ಮೃತರು.
ಅರಣ್ಯ ಇಲಾಖೆಯ ಕ್ಯಾಂಪ್ ಮುಂಭಾಗವೇ ಹರಿಯುತ್ತಿದ್ದ ಕಬಿನಿ ಹಿನ್ನೀರಿನಲ್ಲಿ ಈಜಲು ಹೋಗಿ ದುರಂತಕ್ಕೀಡಾಗಿದ್ದಾರೆ. ಸುಪ್ರೀತ್ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿ ರಾತ್ರಿ ಪಾಳಿಯ ಕರ್ತವ್ಯ ಮುಗಿಸಿ, ಬೆಳಗ್ಗೆ ಸುಮಾರು 8 ಗಂಟೆಯ ವೇಳೆಗೆ ಉದ್ಬೂರು ಗೇಟ್ ಬಳಿಯ ಕಳ್ಳಬೇಟೆ ತಡೆ ಶಿಬಿರದ ಸಮೀಪ ತಮ್ಮ ಇಬ್ಬರು ಸಹೋದ್ಯೋಗಿಗಳಾದ ಅಯ್ಯಪ್ಪ ಹಾಗೂ ಅಮನ್ ಎಂಬುವರೊಂದಿಗೆ ಈಜಲು ಹೋಗಿದ್ದರು.
ಈ ವೇಳೆ ಇದ್ದಕ್ಕಿದಂತೆ ಆಯಾಸಗೊಂಡಿದ್ದ ಸುಪ್ರೀತ್ ತಮ್ಮ ಇಬ್ಬರು ಸಹೋದ್ಯೋಗಿಗಳಿಗೆ ತಾವು ದಡಕ್ಕೆ ಹೋಗುವುದಾಗಿ ಹೇಳಿ ನೀರಿನಿಂದ ಹೊರಬರಲು ಪ್ರಯತ್ನಿಸಿದ್ದಾರೆ. ಆದರೆ ಸಾಧ್ಯವಾಗದೇ ಆಯಾಸದಿಂದ ನೀರಿನಲ್ಲಿ ಮುಳುಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಹೋದ್ಯೋಗಿಗಳ ಚೀರಾಟದಿಂದ ವಿಷಯ ತಿಳಿದು ಸ್ಥಳೀಯರು ಕೂಡಲೇ ಸ್ಥಳಕ್ಕೆ ಆಗಮಿಸಿ, ಸುಪ್ರೀತ್ಗಾಗಿ ಹುಡುಕಾಟ ನಡೆಸಿದರು. ಎಲ್ಲಿಯೂ ಪತ್ತೆಯಾಗಲಿಲ್ಲ. ಘಟನಾ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕದಳದ ಸಿಬ್ಬಂದಿ, ಮುಳುಗು ತಜ್ಞರು ಸುಪ್ರೀತ್ ಗಾಗಿ ಶೋಧ ನಡೆಸಿದಾಗ ಅವರ ಮೃತದೇಹ ಪತ್ತೆಯಾಗಿದೆ.
ಸ್ಥಳದಲ್ಲಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಅಂತರಸಂತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

