ಬೆಂಗಳೂರು: ಕಬ್ಬು ಬೆಳೆಗೆ ಬೆಂಬಲ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ಹಾಗೂ ಸಕ್ಕರೆಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳಕ್ಕೆ ಒತ್ತಾಯಿಸಿ ರಾಜ್ಯಾದ್ಯಾಂತ ಕಬ್ಬು ಬೆಳೆಗಾರರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಕೇಂದ್ರ ಸರ್ಕಾರದೊಂದಿಗೆ ನಡೆದ ಸಭೆ ವಿಫಲವಾದ ಹಿನ್ನೆಲೆಯಲ್ಲಿ ರೈತ ಸಂಘಟನೆ, ಹಸಿರು ಸೇನೆ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ವಿವಿಧ ಜಿಲ್ಲೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.
ಹುಬ್ಬಳ್ಳಿ, ಬೆಳಗಾವಿ, ಮಂಡ್ಯ, ಹಾವೇರಿ, ಕೊಪ್ಪಳ ಮತ್ತು ಧಾರವಾಡ ಸೇರಿದಂತೆ ಹಲವು ಕಡೆ ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದು ರೈತರು ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ.
ರೈತರು ಸಕ್ಕರೆಗೆ ಎಂಎಸ್ಪಿ ದರವನ್ನು 60 ರೂಪಾಯಿ ಹೆಚ್ಚಿಸಬೇಕು ಹಾಗೂ ಕಬ್ಬಿನ ನ್ಯಾಯಸಮ್ಮತ ಮತ್ತು ಲಾಭದಾಯಕ ಬೆಲೆ (FRP) ಏರಿಕೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ರೈತರು ಗಬ್ಬೂರು ಬೈಪಾಸ್ ವೃತ್ತದ ಬಳಿ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಕಲ್ಲು, ಕಟ್ಟಿಗೆ ಹಾಗೂ ಬ್ಯಾರಿಕೇಡ್ಗಳನ್ನು ಅಡ್ಡಲಾಗಿ ಇಟ್ಟು ರಸ್ತೆ ತಡೆ ನಡೆಸಿದರು. ಪ್ರತಿಭಟನೆಯಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಬೆಳಗಾವಿ ಜಿಲ್ಲೆಯಲ್ಲಿ ಮೂರು ಕಡೆ ಕಬ್ಬು ಬೆಳೆಗಾರರು ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಹಿರೇಬಾಗೇವಾಡಿ ಟೋಲ್ ಬಳಿ ರೈತರು ಹೆದ್ದಾರಿಯಲ್ಲಿ ಉರುಳು ಸೇವೆ ನಡೆಸಿ, ಕೈಯಲ್ಲಿ ಪೊರಕೆ ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರೈತ ಮುಖಂಡ ಶಶಿಕಾಂತ ಗುರೂಜಿ ನೇತೃತ್ವದಲ್ಲಿ ನೂರಾರು ರೈತರು ಟೋಲ್ ಗೇಟ್ ಬಂದ್ ಮಾಡಿ, ಹಸಿರು ಶಾಲು ಬೀಸುತ್ತಾ ಧರಣಿ ನಡೆಸಿದರು.
ಇದೇ ವೇಳೆ ಎತ್ತು ಮತ್ತು ಎತ್ತಿನ ಬಂಡಿಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ, ಬಾರಕೋಲು ಬೀಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಬಳಿ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ತಡೆದ ರೈತ ಮುಖಂಡರು, ವಾಹನಗಳಿಗೆ ಅಡ್ಡಲಾಗಿ ಮಲಗಿ ಪ್ರತಿಭಟನೆ ನಡೆಸಿದರು.
ಸಕ್ಕರೆ ನಾಡು ಮಂಡ್ಯದಲ್ಲೂ ಕಬ್ಬು ಬೆಳೆಗಾರರ ಪ್ರತಿಭಟನೆ ಜೋರಾಗಿತ್ತು. ಸಂಜಯ್ ವೃತ್ತದಲ್ಲಿ ಹಳೆ ಬೆಂಗಳೂರು–ಮೈಸೂರು ಹೆದ್ದಾರಿಯನ್ನು ತಡೆದ ರಾಜ್ಯ ರೈತ ಸಂಘ ಮತ್ತು ಕನ್ನಡ ಸೇನೆ ಸಂಘಟನೆಗಳ ಕಾರ್ಯಕರ್ತರು, ರಸ್ತೆಯ ಮಧ್ಯೆ ಧರಣಿ ಕುಳಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.
ಹಾವೇರಿ ಜಿಲ್ಲೆಯ ಬಂಕಾಪುರ ಟೋಲ್ ಗೇಟ್ ಬಳಿ ರೈತರು ಪ್ರತಿಭಟನೆ ನಡೆಸಿದರು. ಕೊಪ್ಪಳದ ಹಿಟ್ನಾಳ್ ಟೋಲ್ ಗೇಟ್ ಬಳಿ ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ ರೈತ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತರು ತಲೆಯ ಮೇಲೆ ಕಲ್ಲು ಹೊತ್ತುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಧಾರವಾಡ ತಾಲೂಕಿನ ತೇಗೂರು ಬಳಿ ರಾಷ್ಟ್ರೀಯ ಹೆದ್ದಾರಿ-4 ಅನ್ನು ಬಂದ್ ಮಾಡಿದ ರೈತರು, ಕಬ್ಬಿಗೆ ಶೀಘ್ರ ದರ ನಿಗದಿ ಮಾಡುವಂತೆ ಒತ್ತಾಯಿಸಿದರು. ಧಾರವಾಡ ಹೊರವಲಯದ ಯರಿಕೊಪ್ಪ ಬಳಿಯೂ ಹೆದ್ದಾರಿ ತಡೆ ನಡೆಸಲಾಯಿತು. ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು.
ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ರೈತರ ಪ್ರತಿಭಟನೆ: ಕರ್ನಾಟಕ-ಮಹಾರಾಷ್ಟ್ರ ರಾಷ್ಟ್ರೀಯ ಹೆದ್ದಾರಿ ಬಂದ್ : ಪರ್ಯಾಯ ಮಾರ್ಗದ ಬಗ್ಗೆ ಇಲ್ಲಿದೆ ಮಾಹಿತಿ
ಬೆಳಗಾವಿ: ಕಬ್ಬು ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ರೈತ ಸಂಘಟನೆಗಳು ಇಂದು ರಾಜ್ಯಾದ್ಯಂತ ರಾಷ್ಟ್ರೀಯ ಹೆದ್ದಾರಿ ಬಮ್ದ್ ಗೆ ಕರೆ ನೀಡಿವೆ. ಪ್ರಮುಖವಾಗಿ ಕರ್ನಾಟಕ ಮಹಾರಾಷ್ಟ್ರ ರಾಷ್ಟ್ರೀಯ ಹೆದ್ದಾರಿ ಬಂದ್ ಗೆ ರೈತರು ಮುಂದಾಗಿದ್ದು, ಹಲವು ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಅಗುವ ಸಾಧ್ಯತೆ ದಟ್ಟವಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಹತ್ತರಗಿ ಟೋಲ್, ಹಿರೇಬಾಗೇವಾಡಿ ಹಾಗೂ ಕೊಗನೊಳ್ಳಿ ಬಳಿ ರೈತರು ಪ್ರತಿಭಟನೆಗೆ ಸಿದ್ಧತೆ ನಡೆದಿದ್ದು, ಪೊಲೀಸರು ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48 ಸೇರಿದಂತೆ ಹಲವು ಮಾರ್ಗಗಳಲ್ಲಿ ವಾಹನ ಸಂಚಾರ ಬದಲಾವಣೆ ಮಾಡಿದ್ದಾರೆ. ಪರ್ಯಾಯ ಮಾರ್ಗಗಳ ಬಗ್ಗೆ ಮಾಹಿತಿ ಇಲ್ಲಿದೆ.
ದೆಹಲಿಯಲ್ಲಿ ಕೇಂದ್ರ ಸರ್ಕಾರದೊಂದಿಗೆ ನಡೆದ ಕಬ್ಬು ಬೆಳೆಗಾರರ ಸಭೆ ವಿಫಲವಾದ ಹಿನ್ನೆಲೆಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಹೆದ್ದಾರಿ ಬಂದ್ಗೆ ಕರೆ ನೀಡಿದೆ. ಬೆಳಗಾವಿ ಜಿಲ್ಲೆಯಲ್ಲಿ ರೈತರ ಪ್ರತಿಭಟನೆ ತೀವ್ರಗೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ಧಾರವಾಡದಿಂದ ಬೆಳಗಾವಿ ಮೂಲಕ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಗಳಲ್ಲಿ ಬದಲಾವಣೆ ಮಾಡಲಾಗಿದೆ.
ಧಾರವಾಡದಿಂದ ಬರುವ ವಾಹನಗಳು ಅಳ್ನಾವರ, ಖಾನಾಪುರ ಮಾರ್ಗವಾಗಿ ಬೆಳಗಾವಿ ಪ್ರವೇಶಿಸಬಹುದು. ಧಾರವಾಡದಿಂದ ಗೋಕಾಕಕ್ಕೆ ತೆರಳುವ ವಾಹನಗಳು ಬೆಳವಡಿ, ಬೈಲಹೊಂಗಲ ಮಾರ್ಗ ಬಳಸುವಂತೆ ಸೂಚಿಸಲಾಗಿದೆ.
ಮಹಾರಾಷ್ಟ್ರದಿಂದ ಹುಬ್ಬಳ್ಳಿ ಕಡೆಗೆ ಬರುವ ವಾಹನಗಳು ಕಾಗಲ್, ನಿಪ್ಪಾಣಿ, ಚಿಕ್ಕೋಡಿ, ಗೋಕಾಕ ಮತ್ತು ಸವದತ್ತಿ ಮಾರ್ಗವಾಗಿ ಧಾರವಾಡ ತಲುಪುವಂತೆ ಸಂಚಾರ ಬದಲಾವಣೆ ಮಾಡಲಾಗಿದೆ. ಭಾರೀ ವಾಹನಗಳು ಹಾಗೂ ಲಘು ವಾಹನಗಳ ಸಂಚಾರಕ್ಕೂ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಬಳಿ ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜಾರಿ ನೇತೃತ್ವದಲ್ಲಿ ಹೆದ್ದಾರಿ ತಡೆ ನಡೆಸಲು ರೈತರು ಮುಂದಾಗಿದ್ದಾರೆ. ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಬಳಿ ರೈತ ಮುಖಂಡ ಪ್ರಕಾಶ ನಾಯಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಚಿಕ್ಕೋಡಿ ತಾಲೂಕಿನ ಕೊಗನೊಳ್ಳಿ ಟೋಲ್ ಬಳಿ ಮಹಾರಾಷ್ಟ್ರದ ರೈತರೂ ಧರಣಿ ನಡೆಸಲು ಸಜ್ಜಾಗಿದ್ದಾರೆ.
ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವ ಬೇಡಿಕೆ ಮುಂದಿಟ್ಟು ಕರ್ನಾಟಕದ ರೈತರ ನಿಯೋಗ ದೆಹಲಿಯಲ್ಲಿ ಕೇಂದ್ರ ಸರ್ಕಾರದೊಂದಿಗೆ ಸೋಮವಾರ ಸಭೆ ನಡೆಸಿತ್ತು. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ರಾಜ್ಯದ ಸಹಕಾರ ಸಚಿವ ಲಕ್ಷ್ಮಣ ಸವದಿ ಕೂಡ ಭಾಗವಹಿಸಿದ್ದರು. ಆದರೆ, ಸಭೆಯಲ್ಲಿ ಬೇಡಿಕೆ ಈಡೇರಿಸುವ ಬಗ್ಗೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ರೈತರು ಸಿಡಿದೆದ್ದಿದ್ದಾರೆ.
ರೈತರಿಗೆ ನೀಡಿದ ಭರವಸೆಯನ್ನು ಕೇಂದ್ರ ಸರ್ಕಾರ ಈಡೇರಿಸಿಲ್ಲ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ರೈತರು ಒಗ್ಗಟ್ಟಾಗಿ ಹೋರಾಟ ನಡೆಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

