ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಮತ್ತೆ ಜೋರಾಗಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಹುಟ್ಟುಹಬ್ಬದ ದಿನ ಮೇ 15ರಂದು ಕಾಂಗ್ರೆಸ್ ಹೈಕಮಾಂಡ್ ಡಿ.ಕೆ.ಶಿವಕುಮಾರ್ ಅವರಿಗೆ ಸಿಹಿ ಸುದ್ದಿ ನೀಡಲಿದೆ ಎಂದು ಕೆಲ ಶಾಸಕರು ಹೇಳಿಕೆ ನೀಡುತ್ತಿದ್ದರೆ ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ಬೆಂಬಲಿಗ ಶಾಸಕರು ಕರ್ನಾಟಕದಲ್ಲಿ ದಲಿತರು ಮುಖ್ಯಮಂತ್ರಿಯಾಗಬೇಕೆಂದು ಹೇಳಿಕೆ ನೀಡುತ್ತಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಸಕ ಕೆ.ಎನ್.ರಾಜಣ್ಣ, ಅಧಿಕಾರ ಮುಂದುವರಿಸಲು ಅಥವಾ ಪದತ್ಯಾಗ ಮಾಡಲು ಸಿದ್ದರಾಮಯ್ಯನವರು ಮಾನಸಿಕವಾಗಿ ಸಿದ್ಧರಾಗಿದ್ದಾರೆ. ಮುಂದೆ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಆಗಬೇಕು ಎನ್ನುವುದು ನಮ್ಮ ಪ್ರಬಲ ಒತ್ತಾಯವಾಗಿದೆ ಎಂದು ಎಂದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಕ್ತ ಮನಸ್ಸಿನಲ್ಲಿದ್ದಾರೆ. ಹೈಕಮಾಂಡ್ ಮತ್ತು ರಾಹುಲ್ ಗಾಂಧಿ ಅವರು ನೀಡುವ ಯಾವುದೇ ಸೂಚನೆಯನ್ನು ಪಾಲಿಸಲು ಅವರು ಸಿದ್ಧರಿದ್ದಾರೆ. ಅಧಿಕಾರ ಮುಂದುವರಿಸಲು ಅಥವಾ ಪದತ್ಯಾಗ ಮಾಡಲು ಅವರು ಮಾನಸಿಕವಾಗಿ ಸಿದ್ಧರಾಗಿದ್ದು, ಪಕ್ಷದ ಹಿತದೃಷ್ಟಿಯಿಂದ ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಮುಂದಿನ ಬಾರಿ ದಲಿತ ಸಮುದಾಯದ ನಾಯಕರು ಮುಖ್ಯಮಂತ್ರಿಯಾಗಬೇಕು ಎಂಬುದು ನಮ್ಮ ಬೇಡಿಕೆ. ಈ ವಿಚಾರವನ್ನು ಈಗಾಗಲೇ ಹೈಕಮಾಂಡ್ ಗಮನಕ್ಕೆ ತರಲಾಗಿದೆ. ಇದರೊಂದಿಗೆ ಸಚಿವ ಸಂಪುಟ ಪುನಾರಚನೆಯೂ ಆಗಬೇಕಿದೆ. ಹೊಸಬರಿಗೆ ಸಚಿವ ಸ್ಥಾನ ನೀಡುವ ಮೂಲಕ ಆಡಳಿತದಲ್ಲಿ ಹೊಸ ಬದಲಾವಣೆ ತರಬೇಕಿದೆ ಎಂದರು.
ಇನ್ನು 2013-18ರ ಅವಧಿಯ ಸಿದ್ದರಾಮಯ್ಯ ಅವರಿಗೂ ಈಗಿನ ಸಿದ್ದರಾಮಯ್ಯ ಅವರಿಗೂ ಬಹಳ ವ್ಯತ್ಯಾಸವಿದೆ. ಅಹಿಂದ ವರ್ಗದ ನಿರೀಕ್ಷೆಗಳು ಸರಿಯಾಗಿ ಈಡೇರುತ್ತಿಲ್ಲ ಎಂಬ ಅಸಮಾಧಾನ ಆ ವರ್ಗಗಳಲ್ಲಿ ಮೂಡಿದೆ. ನಾವು ನೀಡಿದ್ದ ಭರವಸೆಗಳು ಸರಿಯಾಗಿ ಫಲಪ್ರದವಾಗದ ಕಾರಣ ಜನರ ಮನಸ್ಥಿತಿಯಲ್ಲಿ ಬದಲಾವಣೆಯಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
ರಾಜ್ಯ ಸರ್ಕಾರ ಇನ್ನಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡಬೇಕಾದರೆ ಪ್ರಸ್ತುತ ಇರುವ ನಾಯಕತ್ವದ ಗೊಂದಲಗಳನ್ನು ಶೀಘ್ರವಾಗಿ ಬಗೆಹರಿಸಬೇಕು. ಹೈಕಮಾಂಡ್ ಗೊಂದಲ ಮುಂದುವರಿಯಲು ಅವಕಾಶ ನೀಡಬಾರದು. ಗೊಂದಲಗಳು ದೀರ್ಘಕಾಲ ಮುಂದುವರಿದರೆ ಅದು ಪಕ್ಷದ ಮೇಲೆ ದೊಡ್ಡ ಮಟ್ಟದ ಡ್ಯಾಮೇಜ್ ಉಂಟುಮಾಡುತ್ತದೆ. ಹೀಗಾಗಿ ಗಟ್ಟಿಯಾದ ತೀರ್ಮಾನವನ್ನು ಹೈಕಮಾಂಡ್ ತೆಗೆದುಕೊಳ್ಳುಲಿದೆ ಎಂಬ ವಿಶ್ವಾಸ ನಮಗಿದೆ ಎಂದರು.

