ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬರುವ ವೀಡಿಯೋಗಳನ್ನು ನೋಡಿ ಅದು ಅಸಲಿಯೋ ಅಥವಾ ನಕಲಿಯೋ ಎಂದು ಪತ್ತೆಹಚ್ಚುವುದು ಸವಾಲಿನ ಕೆಲಸವಾಗಿದೆ. ಇದಕ್ಕೆ ಲೇಟೆಸ್ಟ್ ಉದಾಹರಣೆ ಎಂದರೆ ಕಣ್ಣಿನ ರೆಪ್ಪೆ ಮುಚ್ಚಿ ತೆಗೆಯುವಷ್ಟರಲ್ಲಿ ನ್ಯಾಯಾಧೀಶರ ಬೆಂಚ್ ಮೇಲಕ್ಕೆ ಹಾರುವ ಕೈದಿಯ ವೀಡಿಯೋ. ಈ ವೀಡಿಯೋ ಈಗ ಇಂಟರ್ನೆಟ್ನಲ್ಲಿ ‘AI ವರ್ಸಸ್ ರಿಯಾಲಿಟಿ’ ಎಂಬ ದೊಡ್ಡ ಚರ್ಚೆಗೆ ನಾಂದಿ ಹಾಡಿದೆ.
ವೀಡಿಯೋದಲ್ಲೇನಿದೆ? ವೈರಲ್ ಆಗಿರುವ ವೀಡಿಯೋದಲ್ಲಿ ಕಿತ್ತಳೆ ಬಣ್ಣದ ಬಟ್ಟೆ ಧರಿಸಿರುವ ಕೈದಿಯೊಬ್ಬ ವಾದ ಮಂಡನೆ ನಡೆಯುತ್ತಿರುವಾಗಲೇ ಇದ್ದಕ್ಕಿದ್ದಂತೆ ಸೂಪರ್ ಮ್ಯಾನ್ ರೀತಿ ಗಾಳಿಯಲ್ಲಿ ತೇಲುತ್ತಾ ನ್ಯಾಯಾಧೀಶರ ಮೇಲೆರಗುತ್ತಾನೆ. ಅಧಿಕಾರಿಗಳು ಆತನನ್ನು ಹಿಡಿಯಲು ಪ್ರಯತ್ನಿಸಿದಾಗ ಆತನ ದೇಹದ ಚಲನವಲನಗಳು ಅತ್ಯಂತ ವಿಚಿತ್ರವಾಗಿ ಕಾಣುತ್ತವೆ. ಈ ದೃಶ್ಯ ನೋಡುಗರಿಗೆ ಅಚ್ಚರಿ ಮೂಡಿಸುವ ಜೊತೆಗೆ ಹಲವಾರು ಅನುಮಾನಗಳನ್ನೂ ಹುಟ್ಟುಹಾಕಿದೆ.
ನೆಟ್ಟಿಗರ ನಡುವೆ ವಾಗ್ವಾದ ಈ ವೀಡಿಯೋ ಹಂಚಿಕೊಂಡ ಕೆಲವರು, “ಇದು 2024ರಲ್ಲಿ ಲಾಸ್ ವೇಗಾಸ್ ನ್ಯಾಯಾಲಯದಲ್ಲಿ ಡಿಯೋಬ್ರಾ ರೆಡ್ಡೆನ್ ಎಂಬಾತ ನ್ಯಾಯಾಧೀಶ ಮೇರಿ ಕೇ ಹೋಲ್ತಸ್ ಮೇಲೆ ನಡೆಸಿದ ಹಲ್ಲೆ” ಎಂದು ವಾದಿಸುತ್ತಿದ್ದಾರೆ. ಆದರೆ, ತಂತ್ರಜ್ಞಾನದ ಬಗ್ಗೆ ಅರಿವಿರುವ ಮತ್ತೊಂದು ವರ್ಗ ಇದನ್ನು ಸಾರಾಸಗಟಾಗಿ ತಳ್ಳಿಹಾಕುತ್ತಿದೆ. “ಆ ಲಾಸ್ ವೇಗಾಸ್ ಘಟನೆಯೇ ಬೇರೆ, ಈ ವೀಡಿಯೋವೇ ಬೇರೆ. ಇದನ್ನು ಗಮನವಿಟ್ಟು ನೋಡಿ, ಹಲ್ಲೆ ನಡೆಯುವಾಗ ಅಲ್ಲಿರುವ ಜನರು ಯಾವುದೇ ಪ್ರತಿಕ್ರಿಯೆ ನೀಡದೆ ಪ್ರತಿಮೆಯಂತೆ ಕುಳಿತಿದ್ದಾರೆ. ಕೈದಿಯ ದೇಹವು ಅಸಹಜವಾಗಿ ತಿರುಗುತ್ತಿದೆ. ಇದು ನೂರಕ್ಕೆ ನೂರರಷ್ಟು AI (ಕೃತಕ ಬುದ್ಧಿಮತ್ತೆ) ಸೃಷ್ಟಿಸಿದ ವೀಡಿಯೋ” ಎಂದು ಅವರು ವಿಶ್ಲೇಷಿಸುತ್ತಿದ್ದಾರೆ.
AI ತಂತ್ರಜ್ಞಾನದ ಅಪಾಯ? ವೀಡಿಯೋವನ್ನು ಪ್ರೇಮ್ ಬೈ ಪ್ರೇಮ್ ಗಮನಿಸಿದ ನೆಟ್ಟಿಗರು ಕೆಲವು ಕುತೂಹಲಕಾರಿ ಅಂಶಗಳನ್ನು ಪತ್ತೆಹಚ್ಚಿದ್ದಾರೆ. ಕೈದಿ ಹಾರುವಾಗ ಆತನ ಪಾದರಕ್ಷೆಗಳು ಕಳಚದೆ ಇರುವುದು, ನೆಲಕ್ಕೆ ಬೀಳುವಾಗ ಆತನ ತಲೆ ಕುರ್ಚಿಗೆ ಬಡಿದರೂ ಯಾವುದೇ ನೈಸರ್ಗಿಕ ಬದಲಾವಣೆ ಕಾಣದಿರುವುದು ಇದು ಕೃತಕವಾಗಿ ಸೃಷ್ಟಿಸಿದ ವೀಡಿಯೋ ಎಂಬ ಅನುಮಾನಕ್ಕೆ ಪುಷ್ಟಿ ನೀಡಿದೆ. ಈ ಘಟನೆಯು ಆನ್ಲೈನ್ ಜಗತ್ತಿನಲ್ಲಿ ನಕಲಿ ವೀಡಿಯೋಗಳು ಎಷ್ಟು ವೇಗವಾಗಿ ಸತ್ಯದಂತೆ ಬಿಂಬಿತವಾಗುತ್ತವೆ ಎಂಬುದಕ್ಕೆ ದೊಡ್ಡ ಉದಾಹರಣೆಯಾಗಿದೆ.
ಸದ್ಯ ಈ ವೀಡಿಯೋ ಡಿಜಿಟಲ್ ಜಗತ್ತಿನಲ್ಲಿ ‘ಯಾವುದು ಸತ್ಯ, ಯಾವುದು ಸುಳ್ಳು?’ ಎಂಬ ಗೊಂದಲಕ್ಕೆ ಸಾಕ್ಷಿಯಾಗಿದೆ. ಯಾವುದೇ ವೀಡಿಯೋ ಹಂಚಿಕೊಳ್ಳುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಇಂದಿನ ಕಾಲದ ಅನಿವಾರ್ಯತೆಯಾಗಿದೆ.

