ಭಾರತದಲ್ಲಿನ ಉದ್ಯೋಗದ ಕುರಿತು ಲಿಂಕ್ಡ್ ಇನ್ ವರದಿಯೊಂದನ್ನು ಬಿಡುಗಡೆ ಮಾಡಿದೆ. ಶೇ 84 ರಷ್ಟು ವೃತ್ತಿಪರರು ತಾವು ಹೊಸ ಉದ್ಯೋಗ ಹುಡುಕಲು ಸಿದ್ಧರಿಲ್ಲ ಎಂದು ಭಾವಿಸುತ್ತಾರೆ. ಆದರೂ ಶೇ 72ರಷ್ಟು ಮಂದಿ 2026ರಲ್ಲಿ ಹೊಸ ಹುದ್ದೆಗಾಗಿ ಹುಡುಕಾಟ ನಡೆಸಿರುವುದಾಗಿ ಹೇಳುತ್ತಾರೆ ಎಂದು ತಿಳಿಸಿದೆ.
ಲಿಂಕ್ಡ್ ಇನ್ ತನ್ನ ನೂತನ ವರದಿಯಲ್ಲಿ ಈ ಬದಲಾವಣೆಯು ನೇಮಕಾತಿ ಪ್ರಕ್ರಿಯೆಯಲ್ಲಿ ಎಐ ಬಳಕೆ ಹೆಚ್ಚಳ, ಇಂದಿನ ಉದ್ಯೋಗಗಳಿಗೆ ಬೇಕಾದ ಕೌಶಲ್ಯಗಳಲ್ಲಿ ಆಗಿರುವ ಬದಲಾವಣೆ ಮತ್ತು ಹೆಚ್ಚು ಸ್ಪರ್ಧಾತ್ಮಕವಾದ, ಬಹಳ ಎಚ್ಚರಿಕೆಯಿಂದ ಆರಿಸಿಕೊಳ್ಳುವ ಉದ್ಯೋಗ ಮಾರುಕಟ್ಟೆಯ ಕಾರಣಗಳಿಂದ ಆಗಿದೆ ಎಂದು ಹೇಳಿದೆ.
ವಿಶ್ವದ ಅತಿದೊಡ್ಡ ವೃತ್ತಿಪರ ನೆಟ್‌ವರ್ಕ್ ಆದ ಲಿಂಕ್ಡ್ ಇನ್‌ನ ಹೊಸ ಸಮೀಕ್ಷೆಯ ಪ್ರಕಾರ, ಅನೇಕ ವೃತ್ತಿಪರರು ಎಐ-ಆಧಾರಿತ ನೇಮಕಾತಿ ಪ್ರಕ್ರಿಯೆಯಲ್ಲಿ ದಿಕ್ಕುತಪ್ಪಿದ್ದಾರೆ. ಶೇ 87ರಷ್ಟು ಮಂದಿ ಕೆಲಸದಲ್ಲಿ ಎಐ ಬಳಸುವುದರಲ್ಲಿ ನಿರಾಳತೆ ಕಂಡುಕೊಂಡಿದ್ದಾರೆ. ಆದರೆ ನೇಮಕಾತಿಯಲ್ಲಿ ಎಐ ಹೇಗೆ ಬಳಕೆಯಾಗುತ್ತಿದೆ? ಎಂಬುದರ ಬಗ್ಗೆ ಅನೇಕರಿಗೆ ಅನುಮಾನಗಳಿವೆ.
ಶೇ 77ರಷ್ಟು ಮಂದಿ ಈ ಎಐ ಪ್ರಕ್ರಿಯೆಯಲ್ಲಿ ಹೆಚ್ಚು ಹಂತಗಳಿವೆ ಎಂದು ಹೇಳುತ್ತಾರೆ ಮತ್ತು ಶೇ 66ರಷ್ಟು ಮಂದಿ ಈ ಪ್ರಕ್ರಿಯೆಯಲ್ಲಿ ವೈಯಕ್ತಿಕತೆ ಇಲ್ಲವಾಗುತ್ತಿದೆ ಎಂದು ಭಾವಿಸುತ್ತಾರೆ. ನೇಮಕಾತಿದಾರರ ಪ್ರತಿಕ್ರಿಯೆ ಸಮಯ ಮತ್ತು ಪ್ರತಿಕ್ರಿಯೆಯ ಕೊರತೆಯಿಂದ ಕಾಯುವಿಕೆಯಿಂದ ಜಾಸ್ತಿ ಒತ್ತಡ ಉಂಟಾಗುತ್ತದೆ.
ಇದರಿಂದ ಎಲ್ಲಾ ತಲೆಮಾರುಗಳ ವೃತ್ತಿಪರರು ತಮ್ಮ ಅರ್ಜಿಯನ್ನು ಹೇಗೆ ಎದ್ದು ಕಾಣುವಂತೆ ಮಾಡಬೇಕು? ಎಂದು ತಿಳಿಯದೆ ಸಮಸ್ಯೆ ಎದುರಿಸುತ್ತಾರೆ. ಸಂಶೋಧನಾ ಸಮೀಕ್ಷೆ ಪ್ರಕಾರ, ಉದ್ಯೋಗ ಹುಡುಕುವ ಭಾರತೀಯರಿಗೆ ಎಐ, ಪ್ರೊಡಕ್ಟಿವಿಟಿಗೆ ನೆರವಾಗುವ ಸಾಧನದಿಂದ ವಿಶ್ವಾಸ ಹೆಚ್ಚಿಸುವ ಸಾಧನವಾಗಿ ಬದಲಾಗಿದೆ.
ಶೇ 94ರಷ್ಟು ಮಂದಿ ತಮ್ಮ ಉದ್ಯೋಗ ಹುಡುಕಾಟದಲ್ಲಿ ಎಐ ಬಳಸಲು ಯೋಜಿಸುತ್ತಾರೆ ಮತ್ತು ಶೇ 66ರಷ್ಟು ಮಂದಿ ಅದು ಸಂದರ್ಶನ ಸಂದರ್ಭದಲ್ಲಿ ವಿಶ್ವಾಸ ಹೆಚ್ಚಿಸುತ್ತದೆ ಎಂದು ಹೇಳುತ್ತಾರೆ.
ಸುಮಾರು ಶೇ 76ರಷ್ಟು ಉದ್ಯೋಗ ಹುಡುಕುವವರು ಕಳೆದ ವರ್ಷದಿಂದ ಹೊಸ ಉದ್ಯೋಗ ಹುಡುಕಾಟ ಕಠಿಣವಾಗಿದೆ ಎಂದು ಹೇಳುತ್ತಾರೆ. ಲಿಂಕ್ಡ್ ಇನ್ ಮಾಹಿತಿ ಪ್ರಕಾರ, 2022ರ ಆರಂಭದಿಂದ ಭಾರತದಲ್ಲಿ ಒಂದು ಉದ್ಯೋಗಕ್ಕೆ ಅರ್ಜಿ ಸಲ್ಲಿಸುವವರ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ. ಇದು ಸ್ಪರ್ಧೆಯನ್ನು ತೀವ್ರಗೊಳಿಸಿ ಅನೇಕರು ತಮಗೆ ಸಿದ್ಧತೆಯ ಕೊರತೆ ಎಂದು ಭಾವಿಸುವಂತೆ ಮಾಡಿದೆ.
ನೇಮಕಾತಿ ಕಠಿಣ: ಉದ್ಯೋಗ ಹುಡುಕುವವರು ಮಾತ್ರವಲ್ಲ, ಭಾರತೀಯ ನೇಮಕಾತಿದಾರರಲ್ಲಿ ಶೇಕಡ 74ರಷ್ಟು ಮಂದಿ ಕಳೆದ ವರ್ಷದಿಂದ ಯೋಗ್ಯ ಅಭ್ಯರ್ಥಿಗಳನ್ನು ಹುಡುಕುವುದು ಕಠಿಣವಾಗಿದೆ ಎಂದು ಹೇಳುತ್ತಾರೆ.
ಜೆನ್ ಎಕ್ಸ್ ಉದ್ಯೋಗ ಹುಡುಕುವವರಲ್ಲಿ ಶೇಕಡ 32ರಷ್ಟು ಮಂದಿ ಹೊಸ ಕೆಲಸಗಳು ಅಥವಾ ಹುದ್ದೆಗಳನ್ನು ಪರಿಗಣಿಸುತ್ತಿದ್ದಾರೆ. ಜೆನ್ ಜೀಗಳಲ್ಲಿ 32ರಷ್ಟು ಮಂದಿ ತಮ್ಮ ಪ್ರಸ್ತುತ ಉದ್ಯಮದ ಹೊರಗಿನ ಹುದ್ದೆಗಳನ್ನು ಹುಡುಕುತ್ತಿದ್ದಾರೆ. ಅದೇ ಸಮಯದಲ್ಲಿ, ಹೆಚ್ಚು ಮಂದಿ ಸಾಂಪ್ರದಾಯಿಕ ಹುದ್ದೆಗಳನ್ನು ಬಿಟ್ಟು ಉದ್ಯಮಶೀಲತೆಗೆ ಹೆಜ್ಜೆ ಇಡುತ್ತಿದ್ದಾರೆ.
ಲಿಂಕ್ಡ್ ಇನ್‌ನಲ್ಲಿ ಸಂಸ್ಥಾಪಕ ಎಂಬ ಸ್ಥಾನವು ತ್ವರಿತವಾಗಿ ಹೆಚ್ಚಾಗುತ್ತಿದೆ. ಲಿಂಕ್ಡ್ ಇನ್ ಕೆರಿಯರ್ ಎಕ್ಸ್ ಫರ್ಟ್ ಮತ್ತು ಲಿಂಕ್ಡ್ ಇನ್ ಇಂಡಿಯಾ ನ್ಯೂಸ್‌ನ ಸೀನಿಯರ್ ಮ್ಯಾನೇಜಿಂಗ್ ಎಡಿಟರ್ ನಿರಜಿತಾ ಬ್ಯಾನರ್ಜಿ ಈ ಕುರಿತು ಮಾತನಾಡಿ, “ಎಐ ಈಗ ಭಾರತದ ಉದ್ಯೋಗ ಮಾರುಕಟ್ಟೆಯಲ್ಲಿ ವೃತ್ತಿಗಳನ್ನು ರೂಪಿಸುವ ಮತ್ತು ಪ್ರತಿಭೆಯನ್ನು ಮೌಲ್ಯಮಾಪನ ಮಾಡುವ ಪ್ರಕ್ರಿಯೆಯ ಮೂಲಭೂತ ಭಾಗವಾಗಿದೆ. ತಮ್ಮ ಕೌಶಲ್ಯಗಳು ಅವಕಾಶಗಳಾಗಿ ಹೇಗೆ ಬದಲಾಗುತ್ತವೆ ಮತ್ತು ನೇಮಕಾತಿ ನಿರ್ಧಾರಗಳು ನಿಜವಾಗಿ ಹೇಗೆ ತೆಗೆದುಕೊಳ್ಳಲಾಗುತ್ತದೆ ಎಂಬುದರ ಸ್ಪಷ್ಟ ತಿಳುವಳಿಕೆ ಇರಬೇಕಾದದ್ದು ವೃತ್ತಿಪರರಿಗೆ ಅತ್ಯಂತ ಅಗತ್ಯ” ಎಂದು ಹೇಳಿದ್ದಾರೆ.
“ಉದ್ದೇಶಪೂರ್ವಕವಾಗಿ ಬಳಸಿದರೆ, ಎಐ ಸಾಧನಗಳು ಆ ಅಂತರವನ್ನು ತುಂಬಬಲ್ಲವು. ಸರಿಯಾದ ಹುದ್ದೆಗಳನ್ನು ಗುರುತಿಸಲು, ಉದ್ದೇಶದೊಂದಿಗೆ ತಯಾರಾಗಲು ಮತ್ತು ಕೌಶಲ್ಯ ಕಲಿಕೆಯ ಕಡೆಗೆ ಗಮನ ಕೇಂದ್ರೀಕರಿಸಲು ಸಹಾಯ ಮಾಡುತ್ತವೆ. ಅಲ್ಲಿ ಲಿಂಕ್ಡ್ ಇನ್ ಉದ್ಯೋಗ ಹುಡುಕುವವರು ಮತ್ತು ನೇಮಕಾತಿದಾರರಿಗೆ ಆ ಕ್ಷಣವನ್ನು ಬಳಸಿಕೊಳ್ಳಲು ಸಹಾಯ ಮಾಡುತ್ತದೆ” ಎಂದರು.
ಲಿಂಕ್ಡ್ ಇನ್ ಜಾಬ್ಸ್ ಆನ್ ದಿ ರೈಸ್ ಈಗ ಬೇಡಿಕೆ ಇರುವ ಹುದ್ದೆಗಳನ್ನು ತೋರಿಸುತ್ತದೆ. 2026ಕ್ಕೆ ಉದ್ಯೋಗ ಹುಡುಕುವವರು ಉತ್ತಮವಾಗಿ ಸಿದ್ಧರಾಗಲು ಸಹಾಯ ಮಾಡಲು, ಲಿಂಕ್ಡ್ ಇನ್‌ನ ಇಂಡಿಯಾ ಜಾಬ್ಸ್ ಆನ್ ದಿ ರೈಸ್ ವರದಿಯು ಕಳೆದ 3 ವರ್ಷಗಳಲ್ಲಿ ಅತ್ಯಂತ ತ್ವರಿತವಾಗಿ ಬೆಳೆಯುತ್ತಿರುವ ಹುದ್ದೆಗಳನ್ನು ಹೈಲೈಟ್ ಮಾಡುತ್ತದೆ.
ಈ ವರ್ಷದ ಪಟ್ಟಿಯಲ್ಲಿ ಪ್ರಾಂಪ್ಟ್ ಇಂಜಿನಿಯರ್, ಎಐ ಇಂಜಿನಿಯರ್ ಮತ್ತು ಸಾಫ್ಟ್ ವೇರ್ ಇಂಜಿನಿಯರ್ ಹುದ್ದೆಗಳು ಮುಂಚೂಣಿಯಲ್ಲಿವೆ. ಇದು ಎಐ ಮತ್ತು ತಂತ್ರಜ್ಞಾನ ಪ್ರತಿಭೆಗೆ ಇರುವ ನಿರಂತರ ಬೇಡಿಕೆಯನ್ನು ತೋರಿಸುತ್ತದೆ.
ಶುದ್ಧ ತಂತ್ರಜ್ಞಾನದ ಹೊರತಾಗಿ, ಮಾರಾಟ ಮತ್ತು ಬ್ರ್ಯಾಂಡ್ ಸ್ಟ್ರಾಟಜಿ, ಸೈಬರ್ ಸೆಕ್ಯುರಿಟಿ ಮತ್ತು ಸಲಹಾ ಕಾರ್ಯಗಳಲ್ಲಿ ಆರೋಗ್ಯಕರ ಬೇಡಿಕೆ ಕಾಣುತ್ತಿದೆ. ಅದೇ ಸಮಯದಲ್ಲಿ, ಪಶುವೈದ್ಯ, ಸೋಲಾರ್ ಕನ್ಸಲ್ಟೆಂಟ್ ಮತ್ತು ಬಿಹೇವಿಯರಲ್ ಥೆರಪಿಸ್ಟ್ ಪಾತ್ರಗಳ ಬೇಡಿಕೆಯೂ ಏರುತ್ತಿವೆ.

