ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ ವಿವಿಯ ಮಾಜಿ ಉಪ ಕುಲಸಚಿವ ಸೇರಿ ಇಬ್ಬರಿಗೆ ಮೈಸೂರಿನ ಒಂದನೇ ಅಧಿಕ ಸಿಜೆಎಂ ನ್ಯಾಯಾಲಯ ಎರಡೂವರೆ ವರ್ಷ ಕಾರಾಗೃಹ ಶಿಕ್ಷೆ ಮತ್ತು ತಲಾ 40,000 ರೂ. ದಂಡ ವಿಧಿಸಿ ಆದೇಶಿಸಿದೆ.
ಮೈಸೂರು ನಿವಾಸಿಗಳಾದ ಮುಕ್ತ ವಿವಿಯ ನಿವೃತ್ತ ಉಪ ಕುಲಸಚಿವ ಎಂ. ಕೃಷ್ಣಮೂರ್ತಿ ಮತ್ತು ಮಂಜುನಾಥ್ ಶಿಕ್ಷೆಗೆ ಒಳಗಾದವರು. ಕೃಷ್ಣಮೂರ್ತಿ ಅವರು ಮಂಜುನಾಥನೊಂದಿಗೆ ಸೇರಿಕೊಂಡು ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಪ್ರಥಮ ದರ್ಜೆ ಸಹಾಯಕರು ಮತ್ತು ದ್ವಿತೀಯ ದರ್ಜೆ ಸಹಾಯಕರ ಕೆಲಸ ಕೊಡಿಸುವುದಾಗಿ 8 ಲಕ್ಷ ರೂಪಾಯಿ ಪಡೆದುಕೊಂಡಿದ್ದರು. ಆದರೆ ಕೆಲಸ ಕೊಡಿಸದೇ ವಂಚಿಸಿದ್ದರು. ಹಣ ನೀಡಿ ವಂಚನೆಗೊಳಗಾದವರು ನೀಡಿದ ದೂರಿನ ಮೇರೆಗೆ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

