ಹಾಸನ: ಜೆಡಿಎಸ್ ಪಕ್ಷದ ಬೆಳ್ಳಿಹಬ್ಬ ಮತ್ತು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಜೆಡಿಎಸ್ ಪಕ್ಷದಿಂದ ಶನಿವಾರ ಹಾಸನದ ಹೊರವಲಯದಲ್ಲಿರುವ ಬುಡಾ ಬಡಾವಣೆಯಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ.
ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು, ರಾಜ್ಯ ಘಟಕದ ಅಧ್ಯಕ್ಷರಾಗಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಶಾಸಕರಾದ ಹೆಚ್.ಡಿ. ರೇವಣ್ಣ, ಸ್ವರೂಪ್ ಪ್ರಕಾಶ್, ಯುವ ಜೆಡಿಎಸ್ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮುಖಂಡರಾದ ಸಾ.ರಾ. ಮಹೇಶ್, ಬೋಜೇಗೌಡ ಸೇರಿದಂತೆ ಹಲವು ನಾಯಕರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಎರಡು ಲಕ್ಷಕ್ಕೂ ಅಧಿಕ ಮಂದಿ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಮುಖ್ಯ ವೇದಿಕೆಯ ಮುಂಭಾಗದಲ್ಲಿ ಒಂದು ಲಕ್ಷ ಹಾಗೂ ಅಕ್ಕಪಕ್ಕದ ಸ್ಥಳಗಳಲ್ಲಿ ಹೆಚ್ಚುವರಿಯಾಗಿ 50,000 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಇನ್ನು ಪಕ್ಷದ ಕಾರ್ಯಕರ್ತರನ್ನು ಕರೆತರಲು 1,300 ಬಸ್ ಗಳ ವ್ಯವಸ್ಥೆ ಮಾಡಲಾಗಿದ್ದು, ಊಟದ ವ್ಯವಸ್ಥೆಗಾಗಿ ಒಂದು ಸಾವಿರ ಸಿಬ್ಬಂದಿ ನಿಯೋಜಿಸಲಾಗಿದೆ.
ಬೃಹತ್ ಸಮಾವೇಶಕ್ಕಾಗಿ 1500ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಭದ್ರತೆಗೆ ನಿಯೋಜಿಸಲಾಗಿದೆ. ಜೆಡಿಎಸ್ ಸಮಾವೇಶದ ಹಿನ್ನೆಲೆಯಲ್ಲಿ ಹಾಸನ ಸೇರಿದಂತೆ ಜಿಲ್ಲೆಯೆಲ್ಲೆಡೆ ಪಕ್ಷದ ಫ್ಲೆಕ್ಸ್, ಬ್ಯಾನರ್, ಕಟೌಟ್ ಗಳು ರಾರಾಜಿಸುತ್ತಿವೆ.

