HomeKarnatakaನನ್ನಿಂದಲೇ ಜಿ.ಟಿ ದೇವೇಗೌಡ ಗೆದ್ದಿದ್ದು ಎಂದಿದ್ದ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಶಕ್ತಿ ಪ್ರದರ್ಶನದ ಮೂಲಕ ತಿರುಗೇಟು ನೀಡಿದ...

ನನ್ನಿಂದಲೇ ಜಿ.ಟಿ ದೇವೇಗೌಡ ಗೆದ್ದಿದ್ದು ಎಂದಿದ್ದ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಶಕ್ತಿ ಪ್ರದರ್ಶನದ ಮೂಲಕ ತಿರುಗೇಟು ನೀಡಿದ ಜಿಟಿಡಿ

ಮೈಸೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗಳಿಗೆ ಹಿರಿಯ ಶಾಸಕ ಜಿ.ಟಿ.ದೇವೇಗೌಡ ಮೈಸೂರಿನಲ್ಲಿ ಸೈಲೆಂಟ್ ಆಗಿ ಶಕ್ತಿ ಪ್ರದರ್ಶನ ಮಾಡುವ ಮೂಲಕ ತಿರುಗೇಟು ನೀಡಿದಂತಿದೆ. 2028ರ ಚುನಾವಣೆಗೆ ಈಗಿನಿಂದಲೇ ರಾಜಕೀಯ ನಾಯಕರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ದಳಪತಿಗಳ ರಾಜಕೀಯ ಕದನ ಶುರುವಾಗಿದ್ದು, ಚಟುವಟಿಕೆಗಳು ಗರಿಗೆದರಿವೆ. ನನ್ನಿಂದಲೇ ಜಿ.ಟಿ ದೇವೇಗೌಡ ಗೆದ್ದಿದ್ದು ಎಂದು ಹೇಳಿಕೆ ನೀಡಿದ್ದ ಹೆಚ್‌.ಡಿ ಕುಮಾರಸ್ವಾಮಿ ಅವರ ಮಾತಿಗೆ ಇದೀಗ ಶಕ್ತಿ ಪ್ರದರ್ಶನದ ಮೂಲಕ ಜಿ.ಟಿ ದೇವೇಗೌಡ ಉತ್ತರ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕರ್ನಾಟಕ ಸಹಕಾರ ಮಹಾ ಮಂಡಲದ ಅಧ್ಯಕ್ಷರಾದ ಬೆನ್ನಲ್ಲೇ ಶಾಸಕ ಜಿ.ಟಿ.ದೇವೇಗೌಡ ಶಕ್ತಿ ಪ್ರದರ್ಶನ ನಡೆಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಜನರಿಂದ ಇಂದು ಮೈಸೂರು ನಗರದಲ್ಲಿ ಬೃಹತ್‌ ಮೆರವಣಿಗೆ ನಡೆದಿದೆ. ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಬೃಹತ್‌ ಮೆರವಣಿಗೆ ನಡೆಸಲಾಗಿದೆ. ಮೆರವಣಿಗೆಯಲ್ಲಿ ಜಿಟಿಡಿ ಫೋಟೋ ಹೊರತುಪಡಿಸಿದರೆ ಜೆಡಿಎಸ್‌ ಪಕ್ಷದ ಭಾವುಟವಾಗಲಿ, ಹಿರಿಯನಾಯಕರ ಫೋಟೋವಾಗಲಿ ಇರಲಿಲ್ಲ. ಈ ಮೂಲಕ ಕುಮಾರಸ್ವಾಮಿ ಅವರ ಹೇಳಿಕೆಗೆ ಟಕ್ಕರ್‌ ನೀಡಿದ್ದಾರೆ ಎನ್ನಲಾಗುತ್ತಿದೆ.

ಶಕ್ತಿ ಪ್ರದರ್ಶನದ ಹಿನ್ನೆಲೆಯಲ್ಲಿ 5 ಜೆಸಿಬಿಗಳಲ್ಲಿ ಪುಷ್ಪಾರ್ಚನೆ ಮಾಡಲಾಗಿದೆ. ಮೆರೆವಣಿಗೆ ವೇಳೆ ಜೆಸಿಬಿ ಮೂಲಕ 2 ಬೃಹತ್ ಸೇಬಿನ ಹಾರ, 1 ಬೃಹತ್ ಗುಲಾಬಿ ಹಾರ ಹಾಕುವ ಮೂಲಕ ಅಭಿಮಾನಿಗಳು, ಬೆಂಬಲಿಗರು ಜಿ.ಟಿ ದೇವೇಗೌಡರನ್ನ ಸನ್ಮಾನಿಸಿದರು.

ಸುಮಾರು 300 ಕ್ಕೂ ಹೆಚ್ಚು ಬಸ್‌ಗಳಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಅಪಾರ ಸಂಖ್ಯೆಯ ಅಭಿಮಾನಿಗಳು ಆಗಮಿಸಿದ್ದು, ಕ್ಷೇತ್ರದ ಪ್ರತಿ ಹಳ್ಳಿಯಿಂದಲೂ ಜನರನ್ನ ಕರೆಸಲಾಗಿತ್ತು. ಈ ಮೂಲಕ ಜಿ.ಟಿ ದೇವೇಗೌಡ ಅವರು ತಮ್ಮ ಶಕ್ತಿಪ್ರದರ್ಶನ ಮಾಡಿದ್ದಾರೆ.

ಇದೇ ವೇಳೆ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದ ಜಿ.ಟಿ.ದೇವೇಗೌಡ ಕಳೆದ 3 ವರ್ಷಗಳಿಂದ ಜೆಡಿಎಸ್‌ನಿಂದ ನನಗೆ ಅವಮಾನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಾನು ಜೆಡಿಎಸ್ ಶಾಸಕ. ಆದರೆ ಜೆಡಿಎಸ್‌ನ ಯಾವುದೇ ಕಾರ್ಯಕ್ರಮಕ್ಕೂ ನನ್ನನ್ನು ಕರೆಯಲಿಲ್ಲ. ಯಾವುದೇ ಜೆಡಿಎಸ್ ಸಮಾವೇಶಕ್ಕೂ ಕರೆಯದೆ ನನಗೆ ಅವಮಾನ ಮಾಡಿದರು. ಈ ಅವಮಾನಕ್ಕೆ ಉತ್ತರಕ್ಕಾಗಿ ನಮ್ಮ ಜನ ಮೆರವಣಿಗೆ ಮಾಡುತ್ತಿದ್ದಾರೆ. ಇದು ನನ್ನ ಶಕ್ತಿ ಪ್ರದರ್ಶನವಲ್ಲ. ಇದು ಜನರು ನನಗೆ ಕೊಟ್ಟಿರುವ ಪ್ರೀತಿಯ ಸಂಕೇತ ಎಂದು ಹೇಳಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪಕ್ಷ ಮುಖ್ಯವಲ್ಲ, ಜಿ.ಟಿ ದೇವೇಗೌಡ ಮಾತ್ರ ಮುಖ್ಯ. ಪಕ್ಷ ಯಾವುದೇ ಇರಲಿ ಜನರಿಗೆ ಜಿ.ಟಿ ದೇವೇಗೌಡ ಮುಖ್ಯ. ನನ್ನನ್ನ ಏಕಾಂಗಿಯಾಗಲು ಕ್ಷೇತ್ರದ ಜನರು ಬಿಡುವುದಿಲ್ಲ. ನಾನು ಸಾಯುವ ತನಕ ಏಕಾಂಗಿಯಾಗಿ ಈ ಜನರ ಸೇವೆ ಮಾಡುತ್ತೇನೆ. ನಾನು ಹಿಂದೆ ಬಿಜೆಪಿಗೆ ಹೋಗಿದ್ದಾಗ ಜನರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ 3ನೇ ಸ್ಥಾನಕ್ಕೆ ತಂದರು. ಇಲ್ಲಿನ ಜನರಿಗೆ ಜಿ.ಟಿ ದೇವೇಗೌಡ ಮುಖ್ಯ. ಮುಂದಿನ ಚುನಾವಣೆಗೆ ಜನರನ್ನ ಕರೆದು ಅವರು ಹೇಳಿದಂತೆ ಕೇಳುತ್ತೇನೆ ಎಂದು ತಿಳಿಸಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಭ್ಯರ್ಥಿ ಯಾರು ಅಂತ ಜನ ನೋಡಲ್ಲ. ಅವರು ನನ್ನ ಮುಖ ನೋಡುತ್ತಾರೆ ಎಂದು ಹೆಚ್‌.ಡಿ.ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದ್ದಾರೆ. ನಾನು ಹಿಂದೆ ಬಿಜೆಪಿಗೆ ಹೋದಾಗ ಚಾಮುಂಡೇಶ್ವರಿಯಲ್ಲಿ ಬಿಜೆಪಿ-ಜೆಡಿಎಸ್ 3ನೇ ಸ್ಥಾನಕ್ಕೆ ಬಂದಿತ್ತು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪಕ್ಷ ಮುಖ್ಯವಲ್ಲ. ಅಲ್ಲಿ ಜಿ.ಟಿ. ದೇವೇಗೌಡ ಮಾತ್ರ ಮುಖ್ಯ. ನನ್ನ ವಿರುದ್ಧ ಎಂಥಂತವರು ನಿಂತರೂ ಜನ ನನ್ನ ಕೈ ಬಿಟ್ಟಿಲ್ಲ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular