ಎಲ್ಲವೂ ಯೋಜನೆಯಂತೆ ನಡೆದಿದ್ದರೆ ತಮಿಳು ನಟ ವಿಜಯ್ ನಟನೆಯ ಜನನಾಯಗನ್ ಚಿತ್ರ ಈ ವರ್ಷದ ಸಂಕ್ರಾಂತಿಯಂದು ತೆರೆ ಕಾಣಬೇಕಿತ್ತು. ಆದರೆ ಸೆನ್ಸಾರ್ ವಿಳಂಬವಾದ ಕಾರಣ ಸಂಕ್ರಾಂತಿಯಂದು ಚಿತ್ರ ಬಿಡುಗಡೆಯಾಗಲು ಸಾಧ್ಯವಾಗಲಿಲ್ಲ.
ಬಳಿಕ ಅನೇಕ ಬಾರಿ ಚಿತ್ರವನ್ನು ತೆರೆಗೆ ತರುವ ಯತ್ನ ಮಾಡಲಾಯಿತು ಹಾಗೂ ಚಿತ್ರದ ಬಿಡುಗಡೆ ವಿಚಾರ ಕೋರ್ಟ್ ಮೆಟ್ಟಿಲನ್ನೂ ಸಹ ಏರಿತ್ತು. ಇತ್ತ ತಮಿಳುನಾಡು ಚುನಾವಣೆ ದಿನಾಂಕ ಘೋಷಣೆಯಾದ ಕಾರಣ ಚಿತ್ರ ಬಿಡುಗಡೆಗೆ ಅವಕಾಶ ಸಿಗದೇ ಮುಂದೂಡಲಾಯಿತು.
ಹೀಗೆ ತೆರೆಗೆ ಅಪ್ಪಳಿಸಲು ಸಿದ್ಧವಿರುವ ಚಿತ್ರ ಯಾವಾಗ ತೆರೆಗೆ ಬರಲಿದೆ ಎಂಬ ಪ್ರಶ್ನೆ ವಿಜಯ್ ಅಭಿಮಾನಿಗಳಲ್ಲಿ ಎದ್ದಿರುವಾಗಲೇ ಸದ್ಯ ಹಲವು ಪೈರಸಿ ವೆಬ್‌ಸೈಟ್‌ಗಳಲ್ಲಿ ಜನನಾಯಗನ್ ಸಂಪೂರ್ಣ ಎಚ್‌ಡಿ ಚಿತ್ರ ಲೀಕ್ ಆಗಿದೆ.
ಮೊದಲಿಗೆ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಇಂಟ್ರೊಡಕ್ಷನ್, ಇಂಟರ್‌ವೆಲ್ ಹಾಗೂ ಕ್ಲೈಮ್ಯಾಕ್ಸ್ ದೃಶ್ಯಗಳ ವಿಡಿಯೊ ಕ್ಲಿಪ್‌ಗಳು ಹರಿದಾಡಿದ್ದವು. ಅವುಗಳನ್ನು ಚಿತ್ರತಂಡ ತೆರವುಗೊಳಿಸಿದ್ದವು. ಈ ಬೆಳವಣಿಗೆ ನಡುವೆಯೇ ಪೈರಸಿ ವೆಬ್‌ಸೈಟ್‌ಗಳಲ್ಲಿ ಜನನಾಯಗನ್ ಚಿತ್ರ ಲೀಕ್ ಆಗಿರುವುದು ಬೆಳಕಿಗೆ ಬಂದಿದೆ.
ಚಿತ್ರ ಲೀಗ್ ಆಗಿದ್ದು, ಅದನ್ನು ಡೌನ್‌ಲೋಡ್ ಮಾಡಿರುವ ಜನರು ಅವುಗಳ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ಪೈರಸಿ ಚಿತ್ರಗಳನ್ನು ಅಪ್‌ಲೋಡ್ ಮಾಡುವ ಪ್ರಸಿದ್ಧ ತಮಿಳ್‌ಎಂವಿ (tamilmv) ವೆಬ್‌ಸೈಟ್ ವಿಜಯ್ ಸದ್ಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಮಗೆ ಅರಿವಿದ್ದು, ಚಿತ್ರ ಅಧಿಕೃತವಾಗಿ ಬಿಡುಗಡೆಯಾಗುವ ತನಕ ತಾವು ಆ ಚಿತ್ರವನ್ನು ಅಪ್‌ಲೋಡ್ ಮಾಡುವುದಿಲ್ಲ ಎಂದು ಬರೆದುಕೊಂಡಿದ್ದು, ಲೀಕ್‌ನಿಂದ ಹಿಂದೆ ಸರಿದಿದೆ.
ಸದ್ಯ ಇಷ್ಟು ದಿನಗಳವರೆಗೆ ಇರದಿದ್ದ ಲೀಕ್ ಇದೀಗ ಚುನಾವಣೆಯ ಸಮಯದಲ್ಲೇ ಆಗಿರುವುದು ಹಲವು ಪ್ರಶ್ನೆ ಹಾಗೂ ಅನುಮಾನಗಳನ್ನು ಹುಟ್ಟುಹಾಕಿದೆ.
Disclaimer: ಚಿತ್ರವಾಗಲಿ, ವೆಬ್‌ಸರಣಿಯಾಗಲಿ ಅಥವಾ ಯಾವುದೇ ಮನರಂಜನೆಯ ವಿಡಿಯೊವಾಗಲಿ, ಅವುಗಳನ್ನು ಬಿಡುಗಡೆಯಾದ ಮೇಲೆ ಅಧಿಕೃತ ಪ್ಲಾಟ್‌ಫಾರ್ಮ್‌ಗಳಲ್ಲೇ ವೀಕ್ಷಿಸಿ. ಪೈರಸಿ ವೆಬ್‌ಸೈಟ್‌ಗಳಲ್ಲಿ ಚಿತ್ರಗಳನ್ನು ವೀಕ್ಷಿಸುವುದು ಅಪರಾಧ ಹಾಗೂ ಶ್ರಮಪಟ್ಟವರಿಗೆ ಮಾಡುವ ಅನ್ಯಾಯ.

