ಜಲಂಧರ್: ಸಾರ್ವಜನಿಕರಿಗೆ ಸೇವೆ ನೀಡಬೇಕಾದ ಸರ್ಕಾರಿ ಸಿಬ್ಬಂದಿಯ ಉದ್ಧಟತನಕ್ಕೆ ಸಾಕ್ಷಿಯಾದ ಘಟನೆಯೊಂದು ಪಂಜಾಬ್‌ನ ಜಲಂಧರ್ ಕ್ಯಾಂಟ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಕೇವಲ ಚಿಲ್ಲರೆ ಹಣದ ವಿಚಾರಕ್ಕಾಗಿ ಮಹಿಳಾ ಟಿಕೆಟ್ ಕ್ಲರ್ಕ್ ಮತ್ತು ಪ್ರಯಾಣಿಕನ ನಡುವೆ ನಡೆದ ಕಿತ್ತಾಟದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಘಟನೆಯ ವಿವರ: ಪ್ರಯಾಣಿಕನೊಬ್ಬ ಟಿಕೆಟ್ ಪಡೆಯಲು ಕೌಂಟರ್‌ಗೆ ತೆರಳಿದಾಗ ಈ ಗಲಾಟೆ ಆರಂಭವಾಗಿದೆ. ಟಿಕೆಟ್ ದರಕ್ಕೆ ಸರಿಯಾದ ಚಿಲ್ಲರೆ ಹಣ ನೀಡುವಂತೆ ಮಹಿಳಾ ಸಿಬ್ಬಂದಿ ಹಠ ಹಿಡಿದಿದ್ದಾರೆ. ಪ್ರಯಾಣಿಕನ ಬಳಿ ಚಿಲ್ಲರೆ ಇಲ್ಲದಿದ್ದಾಗ, ಬಾಕಿ ಹಣವನ್ನು ಡಿಜಿಟಲ್ ಪೇಮೆಂಟ್ ಮೂಲಕ ನೀಡಲು ಆತ ಮುಂದಾಗಿದ್ದಾನೆ. ಆದರೆ, ಇದಕ್ಕೆ ಒಪ್ಪದ ಸಿಬ್ಬಂದಿ ಟಿಕೆಟ್ ನೀಡಲು ನಿರಾಕರಿಸಿದ್ದಲ್ಲದೆ, ಪ್ರಯಾಣಿಕನ ಮೇಲೆ ಕಿರುಚಾಡಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಬೆದರಿಕೆ ಮತ್ತು ಉದ್ಧಟತನ: ವಿಡಿಯೋದಲ್ಲಿ ಕಂಡುಬರುವಂತೆ, ಪ್ರಯಾಣಿಕ ತನ್ನ ಹಕ್ಕಿನ ಬಗ್ಗೆ ಪ್ರಶ್ನಿಸಿದಾಗ ಸಿಬ್ಬಂದಿ ಮತ್ತಷ್ಟು ಕೋಪಗೊಂಡು, “ಟಿಕೆಟ್ ಕೊಡಲ್ಲ, ನೀನು ಏನು ಮಾಡ್ತೀಯಾ ಮಾಡ್ಕೋ” ಎಂಬಂತೆ ದರ್ಪ ತೋರಿದ್ದಾರೆ. ಅಷ್ಟೇ ಅಲ್ಲದೆ, ರೈಲ್ವೆ ರಕ್ಷಣಾ ಪಡೆಗೆ (RPF) ಕರೆ ಮಾಡಿ ನಿನ್ನನ್ನು ಹಿಡಿಸಿಕೊಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಹಣ ನೀಡಿದರೂ ಟಿಕೆಟ್ ನೀಡದೆ ಸತಾಯಿಸುತ್ತಿರುವುದು ಮತ್ತು ಬಾಕಿ ಹಣವನ್ನು ಮರಳಿಸದ ಸಿಬ್ಬಂದಿಯ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನೆಟ್ಟಿಗರ ಆಕ್ರೋಶ: ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ವಿಡಿಯೋ ಹಂಚಿಕೊಂಡಿರುವ ಬಳಕೆದಾರರು, “ಇದು ಕೇವಲ ಉದ್ಧಟತನವಲ್ಲ, ಹಗಲು ದರೋಡೆಯಂತಿದೆ” ಎಂದು ಕಿಡಿಕಾರಿದ್ದಾರೆ. “ಸಾರ್ವಜನಿಕರ ಸೇವೆಯಲ್ಲಿರುವವರು ಈ ರೀತಿ ವರ್ತಿಸಿದರೆ ಜನ ಸಾಮಾನ್ಯರು ಯಾರನ್ನು ನಂಬಬೇಕು?” ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಒಂದು ವೇಳೆ ಇದೇ ರೀತಿ ಪುರುಷ ಸಿಬ್ಬಂದಿ ಮಹಿಳೆಯ ಜೊತೆ ವರ್ತಿಸಿದ್ದರೆ ದೊಡ್ಡ ರಾದ್ಧಾಂತವೇ ಆಗುತ್ತಿತ್ತು, ಈಗ ಈ ಮಹಿಳಾ ಸಿಬ್ಬಂದಿ ವಿರುದ್ಧ ಕ್ರಮ ಯಾರೂ ತಗೋತಾರೆ ಎಂದು ಹಲವರು ಪ್ರಶ್ನಿಸಿದ್ದಾರೆ.
ರೈಲ್ವೆ ಇಲಾಖೆಯ ಈ ರೀತಿಯ ನಡವಳಿಕೆಗಳು ಸಾರ್ವಜನಿಕರ ವಿಶ್ವಾಸಕ್ಕೆ ಧಕ್ಕೆ ತರುತ್ತಿವೆ. ಈ ಘಟನೆಯ ಬಗ್ಗೆ ಇಲಾಖೆಯ ಉನ್ನತ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆಯೇ ಎಂದು ಕಾದು ನೋಡಬೇಕಿದೆ.

