ಮಡಿಕೇರಿ: ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ಪತಿಯಿಂದ ಕೊಲೆಯಾಗಿದ್ದಳೆನ್ನಲಾದ ಪತ್ನಿ 4 ವರ್ಷದ ನಂತರ ಪ್ರಿಯಕರನೊಂದಿಗೆ ದಿಢೀರ್ ಪ್ರತ್ಯಕ್ಷವಾಗಿದ್ದಾಳೆ.
ಕುಶಾಲನಗರ ತಾಲೂಕಿನ ಬಸವನಹಳ್ಳಿ ಗ್ರಾಮದ ಸುರೇಶ್ ಮತ್ತು ಮಲ್ಲಿಗೆ ದಂಪತಿಗೆ ಇಬ್ಬರು ಮಕ್ಕಳಿದ್ದು, ಒಂದು ದಿನ ಮಲ್ಲಿಗೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಸಂಬಂಧಿಕರಲ್ಲಿ ವಿಚಾರಿಸಿದಾಗ ಆಕೆಗೆ ಅಕ್ರಮ ಸಂಬಂಧ ಇರುವುದು ಗೊತ್ತಾಗಿದೆ. ದೂರವಾಣಿ ಮೂಲಕ ಪತ್ನಿಗೆ ಕರೆ ಮಾಡಿದ್ದ ಸುರೇಶ್ ತನ್ನೊಂದಿಗೆ ಜೀವನ ನಡೆಸದಿದ್ದರೂ ಪರವಾಗಿಲ್ಲ. ಮಕ್ಕಳಿಗೆ ತಾಯಿಯಾಗಿ ಇರು ಎಂದು ಮನವಿ ಮಾಡಿದ್ದ. ಆದರೂ ಆಕೆ ಬಂದಿರಲಿಲ್ಲ.
2021ರಲ್ಲಿ ಸುರೇಶ್ ಕುಶಾಲನಗರ ಠಾಣೆಗೆ ಹೋಗಿ ಪತ್ನಿ ನಾಪತ್ತೆಯಾದ ದೂರು ನೀಡಿದ್ದಾರೆ. ಕುಶಾಲನಗರ ಗ್ರಾಮಾಂತರ ಠಾಣೆ ಪೋಲೀಸರು ಸುರೇಶ್ ಪತ್ನಿ ಮಲ್ಲಿಗೆಯನ್ನು ಪತ್ತೆ ಮಾಡಲು ಮುಂದಾಗಿಲ್ಲ. ಆದರೆ, 2022 ರಲ್ಲಿ ನಿಮ್ಮ ಪತ್ನಿಯ ಶವ ಪತ್ತೆಯಾಗಿದೆ ಎಂದ ಪೊಲೀಸರು ಠಾಣೆಗೆ ಬರಲು ಹೇಳಿದ್ದಾರೆ. ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಪೊಲೀಸರು ಸುರೇಶ್ ಮತ್ತು ಆತನ ಅತ್ತೆ ಗೌರಿಯನ್ನು ಕರೆದುಕೊಂಡು ಹೋಗಿ ಅಸ್ಥಿಪಂಜರ ತೋರಿಸಿ ಇದು ನಿಮ್ಮ ಪತ್ನಿಯ ಅಸ್ಥಿಪಂಜರ. ಅಂತ್ಯಸಂಸ್ಕಾರ ಮಾಡಿ ಎಂದು ಅರಣ್ಯದಲ್ಲಿಯೇ ಶವ ಸಂಸ್ಕಾರ ಮಾಡಿಸಿದ್ದಾರೆ.
ನಂತರ ಸುರೇಶ್ ಅವರೇ ಪತ್ನಿ ಮಲ್ಲಿಗೆ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಪೊಲೀಸರು ಜೈಲಿಗೆ ಕಳಿಸಿದ್ದರು. ತಾನು ಪತ್ನಿಯನ್ನು ಕೊಲೆ ಮಾಡಿಲ್ಲ ಎಂದು ಸುರೇಶ್ ಬೇಡಿಕೊಂಡಿದ್ದರೂ ನೀನೇ ಕೊಲೆ ಮಾಡಿರುವುದಾಗಿ ಹೇಳಿ ಪೊಲೀಸರು ಜೈಲಿಗೆ ಕಳುಹಿಸಿದ್ದರು.
ಎರಡು ವರ್ಷದ ನಂತರ ಅಂತ್ಯ ಸಂಸ್ಕಾರವಾಗಿದ್ದ ಮೃತದೇಹದ ಡಿಎನ್ಎ ವರದಿ ಬಂದಿದ್ದು, ಮಲ್ಲಿಗೆ ಕುಟುಂಬಕ್ಕೂ ಮೃತದೇಹದ ಡಿಎನ್ಎಗೂ ಯಾವುದೇ ಸಂಬಂಧ ಇಲ್ಲದ ಕಾರಣ ಸುರೇಶ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
4 ವರ್ಷದಿಂದ ನಾಪತ್ತೆಯಾಗಿದ್ದ ಮಲ್ಲಿಗೆ ಏಪ್ರಿಲ್ 1ರಂದು ಮಡಿಕೇರಿಗೆ ಹೋಟೆಲ್ ಗೆ ಪ್ರಿಯಕರನೊಂದಿಗೆ ಬಂದಿದ್ದಾಳೆ. ಸುರೇಶ್ ಸ್ನೇಹಿತರು ಆಕೆಯ ಫೋಟೋ ತೆಗೆದು ಪೊಲೀಸರು ಮತ್ತು ಸುರೇಶ್ ಗೆ ಕಳುಹಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಹೋಗಿ ಮಲ್ಲಿಗೆ ನೆಲೆಸಿರುವ ಜಾಗವನ್ನು ಪತ್ತೆ ಮಾಡಿ ಮೈಸೂರು ಕೋರ್ಟ್ ಗೆ ಒಪ್ಪಿಸಿದ್ದಾರೆ. ಸುರೇಶ್ ಅಂತ್ಯಸಂಸ್ಕಾರ ಮಾಡಿದ್ದ ಅಸ್ಥಿಪಂಜರ ಯಾರದು ಎನ್ನುವುದು ಇನ್ನೂ ಗೊತ್ತಾಗಿಲ್ಲ. ಆದರೂ, ಪೊಲೀಸರು ಉದ್ದೇಶಪೂರ್ವಕವಾಗಿ ಸುರೇಶ್ ಅವರನ್ನು ಕೊಲೆ ಪ್ರಕರಣದಲ್ಲಿ ಸಿಲುಕಿಸಿ ಜೈಲಿಗೆ ಕಳುಹಿಸಿದ್ದೇಕೆ ಎಂಬ ಚರ್ಚೆ ನಡೆದಿದೆ.