ಬೆಂಗಳೂರು : ಸಾರ್ವಜನಿಕರಿಂದ ಬರುವ ಕರೆಗಳನ್ನು ಅಧಿಕೃತವಾಗಿ ಸ್ವೀಕರಿಸಿ, ಅಪೇಕ್ಷಿತ ಮಾಹಿತಿಯನ್ನು ನೀಡಿ ಕಾನೂನು ವ್ಯಾಪ್ತಿಯಲ್ಲಿ ನಿಯಮಾನುಸಾರ ಆದ್ಯತೆಯ ಮೇರೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರ ಸೂಚಿಸಿದೆ.
ಕರ್ನಾಟಕ ಸರ್ಕಾರದ ಸಚಿವಾಲಯ, ಬಹುಮಹಡಿ ಕಟ್ಟಡ ಬೆಂಗಳೂರು, ಸುತ್ತೋಲೆ ದಿನಾಂಕ 26.12.2022
ಏನಿದೆ ಆದೇಶದಲ್ಲಿ..?
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯದ ಗ್ರಾಮೀಣ ಭಾಗದಲ್ಲಿ ದೈನಂದಿನ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದು, ಜನಪ್ರತಿನಿಧಿಗಳ ಹಾಗೂ ಸಾರ್ವಜನಿಕರ ಜೊತೆ ನಿಕಟ ಸಂವರ್ಕ ಹಾಗೂ ಸಂಬಂಧ ಹೊಂದಿರುವ ಜನಸ್ನೇಹಿ ಇಲಾಖೆಯಾಗಿದೆ.
ಈ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ –ಮತ್ತು ಪಂಚಾಯತ್ – ಇಲಾಖೆಯ ಜಿಲ್ಲಾ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುವ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗು ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುವ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯತಿ ಗ್ರೇಡ್-1 & ಗ್ರೇಡ್-2 ಕಾರ್ಯದರ್ಶಿ ಹಾಗೂ ದ್ವಿತೀಯ ದರ್ಜೆ ಲೆಕ್ಕ. ಸಹಾಯಕ ಇವರು ನೇರವಾಗಿ ಜನರ ಹಾಗೂ ಜನಪ್ರತಿನಿಧಿಗಳ ಸಂಪರ್ಕದಲ್ಲಿರುತ್ತಾರೆ. ಮುಖ್ಯವಾಗಿ ಜನರ ಅಹವಾಲುಗಳನ್ನು ಇತ್ಯರ್ಥ ಪಡಿಸುವ ಪ್ರಥಮ ಹಂತದಲ್ಲಿನ ಜವಾಬ್ದಾರಿಯು ಮೇಲೆ ತಿಳಿಸಿದ ವಿವಿಧ ಹಂತದ ಅಧಿಕಾರಿಗಳದ್ದಾಗಿದ್ದು ಈ ನಿಟ್ಟಿನಲ್ಲಿ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳ ದೂರವಾಣಿ ಕರೆಗಳನ್ನು ಸ್ವೀಕರಿಸದಿರುವ ಬಗ್ಗೆ ಹಲವಾರು ದೂರುಗಳು ಇದ್ದು, ಈ ವಿಷಯವು ಸರ್ಕಾರದ ಗಮನಕ್ಕೆ ಬಂದಿರುತ್ತದೆ.
ಆದ್ದರಿಂದ. ಇನ್ನು ಮುಂದೆ ಸಾರ್ವಜನಿಕರಿಂದ ಹಾಗೂ ಜನಪ್ರತಿನಿಧಿಗಳಿಂದ ಕರೆ ಬಂದಲ್ಲಿ, ಅಧಿಕೃತವಾಗಿ ಕರೆಗಳನ್ನು ಸ್ವೀಕರಿಸಿ. ಸದರಿ ಅಹವಾಲು/ಮನವಿಗಳಿಗೆ ಹೆಚ್ಚು ಗಮನ ನೀಡಿ ಕಾನೂನಿನ ವ್ಯಾಪ್ತಿಯಲ್ಲಿ ಪರಿಶೀಲಿಸಿ. ನಿಯಮಾನುಸಾರ ಕ್ರಮ ಕೈಗೊಳ್ಳತಕ್ಕದ್ದು ಒಂದು ವೇಳೆ ಕರೆಗಳನ್ನು ಸಕಾಲದಲ್ಲಿ ಸ್ವೀಕರಿಸಲು ಸಾಧ್ಯವಾಗದೇ ಇದ್ದ ಪಕ್ಷದಲ್ಲಿ ಸಾರ್ವಜನಿಕರಿಗೆ ತಲುಪಿಸುವ ಸೇವೆಗಳಲ್ಲಿ ಏರು ಪೇರು ಉಂಟಾಗುವ ಸಾಧ್ಯತೆಗಳಿರುತ್ತದೆ. ಆದ್ದರಿಂದ, ತಪ್ಪಿದ ಕರೆಗಳಿಗೆ ಮರು ಕರೆ ಮಾಡಿ ಸಾರ್ವಜನಿಕರಿಂದ ಹಾಗೂ ಜನಪ್ರತಿನಿಧಿಗಳಿಂದ ಸ್ವೀಕೃತವಾಗುವ ಕರೆಯ ಕೋರಿಕೆ/ಮನವಿಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಜಿಲ್ಲಾ ಪಂಚಾಯತಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗು ಗ್ರಾಮ ಪಂಚಾಯತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯತಿ ಗ್ರೇಡ್-1 & ಗ್ರೇಡ್-2 ಕಾರ್ಯದರ್ಶಿ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾದಿಯಾಗಿ ಚಾಚು ತಪ್ಪದೇ ನಿಯಮಾನುಸಾರ ಕ್ರಮ ಕೈಗೊಳ್ಳತಕ್ಕದ್ದು, ಜನಪ್ರತಿನಿಧಿಗಳಿಗೆ ಅಗೌರವ ತೋರಿರುವುದು ಕಂಡುಬಂದಲ್ಲಿ ನಿಯಮಾನುಸಾರ ಸೂಕ್ತ ಕ್ರಮ ಜರುಗಿಸಲಾಗುವುದು ಹಾಗೂ ಹಕ್ಕುಚ್ಯುತಿ ಉಂಟಾಗುವ ಸಾಧ್ಯತೆ ಇರುವುದರಿಂದ ಇದಕ್ಕೆ ಅವಕಾಶ ನೀಡದಂತೆ ಜನಪ್ರತಿನಿಧಿಗಳಿಂದ ಹಾಗೂ ಸಾರ್ವಜನಿಕರಿಂದ ಬರುವ ಕರೆಗಳನ್ನು ಅಧಿಕೃತವಾಗಿ ಸ್ವೀಕರಿಸಿ, ಅಪೇಕ್ಷಿತ ಮಾಹಿತಿಯನ್ನು ನೀಡಿ ಕಾನೂನು ವ್ಯಾಪ್ತಿಯಲ್ಲಿ ನಿಯಮಾನುಸಾರ ಆದ್ಯತೆಯ ಮೇರೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.


