ದಕ್ಷಿಣ ಗಾಜಾದ ರಫಾದಲ್ಲಿ ಅಮೆರಿಕಾ ಬೆಂಬಲಿತ ನೆರವು ವಿತರಣಾ ಕೇಂದ್ರದ ಬಳಿ ನಡೆದ ದಾಳಿಯಲ್ಲಿ ಕನಿಷ್ಠ 31 ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿ, 170ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆಗೆ ಸಂಬಂಧಿಸಿದಂತೆ ಇಸ್ರೇಲ್ ರಕ್ಷಣಾ ಪಡೆಗಳು (IDF) ತಮ್ಮ ಪಾತ್ರವನ್ನು ನಿರಾಕರಿಸಿವೆ. ಭಾನುವಾರ ನಡೆದ ಈ ದಾಳಿಯ ಹೊಣೆಯನ್ನು ಹಮಾಸ್‌ನ ಮೇಲೆ ಹಾಕಿ, ದಾಳಿಯನ್ನು ಹಮಾಸ್ ಸಂಘಟಿಸಿದೆ ಎಂದು ಇಸ್ರೇಲ್ ಆರೋಪಿಸಿದೆ.
ಇಸ್ರೇಲ್ ರಕ್ಷಣಾ ಪಡೆಗಳು ಘಟನೆಯ ಡ್ರೋನ್ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ್ದು, “ಗಾಜಾದಲ್ಲಿ ನಾಗರಿಕರಿಗೆ ಆಹಾರ ಸಿಗದಂತೆ ತಡೆಯಲು ಹಮಾಸ್ ತನ್ನೆಲ್ಲಾ ಶಕ್ತಿಯನ್ನು ಬಳಸುತ್ತಿದೆ” ಎಂದು ಹೇಳಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಇಸ್ರೇಲ್ ರಕ್ಷಣಾ ಪಡೆ, “ಇತ್ತೀಚಿನ ಗಂಟೆಗಳಲ್ಲಿ ತಪ್ಪು ವರದಿಗಳು ಹರಡುತ್ತಿವೆ, ಗಾಜಾದಲ್ಲಿನ ಮಾನವೀಯ ನೆರವು ವಿತರಣಾ ಕೇಂದ್ರದ ಬಳಿ ಗಾಜಾ ನಿವಾಸಿಗಳ ಮೇಲೆ ಇಸ್ರೇಲ್ ರಕ್ಷಣಾ ಪಡೆ ಗುಂಡು ಹಾರಿಸಿದೆ ಎಂಬ ಗಂಭೀರ ಆರೋಪಗಳೂ ಸೇರಿವೆ. ಆದರೆ, ಪ್ರಾಥಮಿಕ ತನಿಖೆಯಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ, ಮಾನವೀಯ ನೆರವು ವಿತರಣಾ ಸ್ಥಳದ ಬಳಿ ಅಥವಾ ಒಳಗಿದ್ದ ನಾಗರಿಕರ ಮೇಲೆ ಇಸ್ರೇಲ್ ರಕ್ಷಣಾ ಪಡೆ ಗುಂಡು ಹಾರಿಸಿಲ್ಲ ಮತ್ತು ಈ ಕುರಿತ ವರದಿಗಳು ಸುಳ್ಳು” ಎಂದು ಸ್ಪಷ್ಟಪಡಿಸಿದೆ.
ಡ್ರೋನ್ ದೃಶ್ಯಾವಳಿಗಳನ್ನು ಪೋಸ್ಟ್ ಮಾಡುವ ಮೂಲಕ ಇಸ್ರೇಲ್ ರಕ್ಷಣಾ ಪಡೆ, “ಗಾಜಾದಲ್ಲಿ ಬಂದೂಕುಧಾರಿಗಳು ನೆರವು ಸಂಗ್ರಹಿಸಲು ಹೋಗುತ್ತಿದ್ದ ನಾಗರಿಕರ ಮೇಲೆ ಗುಂಡು ಹಾರಿಸುತ್ತಿರುವುದನ್ನು ಡ್ರೋನ್ ದೃಶ್ಯಾವಳಿಗಳು ತೋರಿಸುತ್ತವೆ. ಗಾಜಾದಲ್ಲಿ ಆಹಾರ ವಿತರಣೆಯನ್ನು ಯಶಸ್ವಿಯಾಗಿ ತಡೆಯಲು ಹಮಾಸ್ ತನ್ನೆಲ್ಲಾ ಶಕ್ತಿಯನ್ನು ಬಳಸುತ್ತಿದೆ” ಎಂದು ಮತ್ತೊಮ್ಮೆ ಪುನರುಚ್ಚರಿಸಿದೆ.
ಅಮೆರಿಕಾ ಆಡಳಿತವು ತನ್ನ ಇತ್ತೀಚಿನ ಕದನ ವಿರಾಮ ಪ್ರಸ್ತಾಪಕ್ಕೆ ಹಮಾಸ್‌ನ ಪ್ರತಿಕ್ರಿಯೆಯನ್ನು ತಿರಸ್ಕರಿಸಿದ ಒಂದು ದಿನದ ನಂತರ ಈ ದಾಳಿ ನಡೆದಿದೆ.

