ಟಾಲಿವುಡ್‌ನ ಯುವ ನಟ ಕಿರಣ್ ಅಬ್ಬಾವರಂ ನಟನೆಯ ಮುಂಬರುವ ಬಹುನಿರೀಕ್ಷಿತ ಚಿತ್ರ ‘ಚೆನ್ನೈ ಲವ್ ಸ್ಟೋರಿ’ ಬಿಡುಗಡೆಗೆ ಸಜ್ಜಾಗುತ್ತಿದೆ. ಆದರೆ ಸಿನಿಮಾ ತೆರೆಕಾಣುವ ಮುನ್ನವೇ ಚಿತ್ರದ ಪ್ರಮುಖ ಟ್ವಿಸ್ಟ್ ಹಾಗೂ ಪ್ರಮುಖ ಪಾತ್ರವೊಂದರ ರಹಸ್ಯ ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿದೆ ಎಂಬ ಸುದ್ದಿಯೊಂದು ಸಖತ್ ವೈರಲ್ ಆಗಿದೆ. ಈ ವಿಚಾರ ಈಗ ಟಾಲಿವುಡ್ ಅಂಗಳದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಈ ಬಗ್ಗೆ ಸ್ವತಃ ನಟ ಕಿರಣ್ ಅಬ್ಬಾವರಂ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಚಿತ್ರದ ಪ್ರಚಾರದ ವೇಳೆ ಈ ಲೀಕ್ ಸುದ್ದಿಯ ಬಗ್ಗೆ ಕಿರಣ್ ಅಬ್ಬಾವರಂ ಅವರಿಗೆ ಪ್ರಶ್ನೆ ಎದುರಾದಾಗ, ಅವರು ಮುಕ್ತವಾಗಿ ಮಾತನಾಡಿದ್ದಾರೆ.
ಕಿರಣ್ ಅಬ್ಬಾವರಂ ಹೇಳಿದ್ದೇನು?
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳು ನಿಜವೇ ಎಂಬ ಪ್ರಶ್ನೆಗೆ ಉತ್ತರಿಸಿದ ಕಿರಣ್, ಇದರಲ್ಲಿ ಯಾವುದು ನಿಜ ಮತ್ತು ಯಾವುದು ಸುಳ್ಳು ಎಂಬುದು ಸಿನಿಮಾ ನೋಡಿದ ಮೇಲಷ್ಟೇ ನಿಮಗೇ ತಿಳಿಯಲಿದೆ. ಇಂತಹ ವದಂತಿಗಳನ್ನು ಹಬ್ಬಿಸುತ್ತಿರುವವರು ಸುಳ್ಳು ಹರಡುತ್ತಿರಬಹುದು. ಇಲ್ಲವೇ ಚಿತ್ರಕ್ಕಾಗಿ ಕೆಲಸ ಮಾಡಿದ ಯಾರಾದರೂ ಸಿನಿಮಾ ವಿಷಯಗಳನ್ನು ಹೊರಗೆ ಹಂಚಿಕೊಂಡಿರಬಹುದು. ಮಾಹಿತಿ ಯಾರು ಲೀಕ್ ಮಾಡಿದ್ದಾರೆ ಎಂದು ನಮಗೆ ತಿಳಿದಿಲ್ಲ. ಹಾಗಾಗಿ ಈ ರೀತಿಯಾಗಿ ಲೀಕ್ ಆಗಿರುವ ಸಾಧ್ಯತೆ ಇರುತ್ತದೆ ಎಂದಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ‘ಚೆನ್ನೈ ಲವ್ ಸ್ಟೋರಿ’ ಸಿನಿಮಾದಲ್ಲಿ ಪ್ರೇಕ್ಷಕರಿಗೆ ಕಾದಿರುವ ಸರ್ಪ್ರೈಸ್ ಅಫೇರ್ ಅಥವಾ ಟ್ವಿಸ್ಟ್‌ಗಳು ಕೊನೆಯವರೆಗೂ ರಹಸ್ಯವಾಗಿರಬೇಕು ಎಂದು ನಾವು ಬಯಸಿದ್ದೆವು. ಆದರೆ ಈ ರೀತಿ ವದಂತಿಗಳು ಹರಡುತ್ತಿರುವುದು ಬೇಸರದ ಸಂಗತಿ ಎಂದು ಅವರು ಹೇಳಿದ್ದಾರೆ.
ಚಿತ್ರತಂಡದ ವಿವರ
‘ಕಲರ್ ಫೋಟೋ’ ಮತ್ತು ‘ಬೇಬಿ’ ನಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಸಾಯಿ ರಾಜೇಶ್ ಮತ್ತು ಎಸ್‌ಕೆಎನ್ ಅವರು ಅಮೃತಾ ಪ್ರೊಡಕ್ಷನ್ಸ್ ಮತ್ತು ಮಾಸ್ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ರವಿ ನಂಬೂರಿ ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಸಾಯಿ ರಾಜೇಶ್ ಕಥೆ ಬರೆದಿದ್ದಾರೆ. ಕಿರಣ್ ಅಬ್ಬಾವರಂಗೆ ಜೋಡಿಯಾಗಿ ಶ್ರೀ ಗೌರಿ ಪ್ರಿಯಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
ಸದ್ಯ ಹರಿದಾಡುತ್ತಿರುವ ಲೀಕ್ ವದಂತಿಗಳ ನಡುವೆಯೂ ಚಿತ್ರತಂಡ ಸಿನಿಮಾದ ಕಂಟೆಂಟ್ ಮೇಲೆ ಭಾರೀ ವಿಶ್ವಾಸ ಹೊಂದಿದ್ದು, ಪ್ರೇಕ್ಷಕರಿಗೆ ಚಿತ್ರ ಇಷ್ಟವಾಗಲಿದೆ ಎಂಬ ನಂಬಿಕೆಯಲ್ಲಿದೆ.

