ಇಸ್ರೇಲ್–ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿ ಭಾರತದ ಮೇಲೆಯೂ ಪರಿಣಾಮ ಬೀರಿದೆ. ವಿಮಾನಗಳ ಹಾರಾಟ ರದ್ದಾಗಿರುವ ಕಾರಣ ವಿವಿಧ ದೇಶಗಳಲ್ಲಿ ಭಾರತದ ಹಲವಾರು ಜನರು ಸಿಲುಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಪರಿಸ್ಥಿತಿ ಕುರಿತು ಮಹತ್ವದ ಸಭೆಯನ್ನು ನಡೆಸಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದಿಂದಾಗಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಪರಿಶೀಲಿಸಲು ಪ್ರಧಾನಮಂತ್ರಿಗಳ ಅಧ್ಯಕ್ಷತೆಯಲ್ಲಿ ಭದ್ರತಾ ಸಚಿವ ಸಂಪುಟ ಸಮಿತಿ (ಸಿಸಿಎಸ್) ಸಭೆ ನಡೆಯಿತು.
ಇರಾನ್ನಲ್ಲಿ ಫೆಬ್ರವರಿ 28ರಂದು ನಡೆದ ವಾಯುದಾಳಿಗಳು ಮತ್ತು ನಂತರದ ಹಲವು ಕೊಲ್ಲಿ ರಾಷ್ಟ್ರಗಳಲ್ಲಿನ ದಾಳಿಗಳು ಸೇರಿದಂತೆ ಉಲ್ಬಣಗೊಳ್ಳುತ್ತಿರುವ ಪರಿಸ್ಥಿತಿಯ ಬಗ್ಗೆ ಸಮಿತಿಯಲ್ಲಿ ಚರ್ಚೆ ನಡೆಯಿತು.
ಆ ಪ್ರದೇಶದಲ್ಲಿ ನೆಲೆಸಿರುವ ದೊಡ್ಡ ಸಂಖ್ಯೆಯ ಭಾರತೀಯ ವಲಸಿಗ ಸಮುದಾಯದ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಸಭೆಯಲ್ಲಿ ಗಂಭೀರ ಕಳವಳ ವ್ಯಕ್ತಪಡಿಸಲಾಯಿತು. ಆ ಪ್ರದೇಶದಿಂದ ಪ್ರವಾಸದಲ್ಲಿರುವ ಭಾರತೀಯ ಪ್ರಯಾಣಿಕರು ಮತ್ತು ನಿಗದಿತ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಎದುರಿಸುತ್ತಿರುವ ತೊಂದರೆಗಳು ಹಾಗೂ ಪ್ರಾದೇಶಿಕ ಭದ್ರತೆ ಮತ್ತು ಆರ್ಥಿಕ ಮತ್ತು ವಾಣಿಜ್ಯ ಚಟುವಟಿಕೆಗಳ ಮೇಲೆ ಅಗಲಿರುವ ವ್ಯಾಪಕ ಪರಿಣಾಮಗಳನ್ನು ಕುರಿತು ಸಭೆ ಪರಾಮರ್ಶೆ ನಡೆಸಿತು.
ಈ ಬೆಳವಣಿಗೆಗಳಿಂದ ಬಾಧಿತರಾದ ಎಲ್ಲಾ ಭಾರತೀಯ ಪ್ರಜೆಗಳಿಗೆ ಸಹಾಯ ಮಾಡಲು ಅಗತ್ಯ ಮತ್ತು ಕಾರ್ಯಸಾಧ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಎಲ್ಲಾ ಸಂಬಂಧಿಸಿದ ಇಲಾಖೆಗಳಿಗೆ ಸಭೆಯಲ್ಲಿ ನಿರ್ದೇಶನ ನೀಡಲಾಗಿದೆ.
ಯುದ್ಧವನ್ನು ಬೇಗನೆ ನಿಲ್ಲಿಸುವ ಮತ್ತು ಸಂವಾದ ಮತ್ತು ರಾಜತಾಂತ್ರಿಕತೆಗೆ ಮರಳುವ ಮಹತ್ವವನ್ನು ಸಭೆಯಲ್ಲಿ ಚರ್ಚಿಸಲಾಗಿದೆ. ಉದ್ವಿಗ್ನ ಪರಿಸ್ಥಿತಿಯ ನಡುವೆ ಪ್ರಧಾನಿ ಮೋದಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.

