ಆಂಧ್ರ ಪ್ರದೇಶದ ಪೊಲೀಸರು ತಂಡ ಬಿಹಾರ ಕೇಡರ್‌ನ ಐಪಿಎಸ್ ಅಧಿಕಾರಿ ಎಂ.ಸುನೀಲ್ ನಾಯಕ್ ಬಂಧಿಸಿದೆ. 2021ರಲ್ಲಿ ಪ್ರಕರಣವೊಂದರಲ್ಲಿ ಕಸ್ಟಡಿಯಲ್ಲಿದ್ದ ಸಂಸದರೊಬ್ಬರಿಗೆ ಥರ್ಡ್ ಡಿಗ್ರಿ ಹಲ್ಲೆ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.
2021ರಲ್ಲಿ ಸುನೀಲ್ ನಾಯಕ್ ಆಂಧ್ರ ಪ್ರದೇಶದ ಸಿಐಡಿ ವಿಭಾಗದ ಡಿಐಜಿ ಆಗಿದ್ದರು. ಕಸ್ಟಡಿಯಲ್ಲಿದ್ದಾಗ ಹಲ್ಲೆಗೊಳಗಾದ ಆರೋಪ ಎದುರಿಸುತ್ತಿದ್ದ ಕೆ. ರಘುರಾಮ ಕೃಷ್ಣರಾಜು ಅವರ ಬಂಧನಕ್ಕೆ ಆದೇಶ ನೀಡಿದ ಆರೋಪ ಐಪಿಎಸ್ ಅಧಿಕಾರಿ ಮೇಲಿದೆ. ಸುನೀಲ್ 2005ನೇ ಬ್ಯಾಚ್ ಐಪಿಎಸ್ ಅಧಿಕಾರಿ.
ಸೋಮವಾರ ಆಂಧ್ರ ಪ್ರದೇಶದ ಪೊಲೀಸರ ತಂಡ ಐಪಿಎಸ್ ಅಧಿಕಾರಿ ಎಂ. ಸುನೀಲ್ ನಾಯಕ್ ಅವರನ್ನು ಪಾಟ್ನಾದಲ್ಲಿರುವ ಅವರ ಅಧಿಕೃತ ನಿವಾಸದಲ್ಲಿ ಬಂಧಿಸಿದೆ. ನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಟ್ರಾನ್ಸಿಟ್ ರಿಮಾಂಡ್ ಮೇಲೆ ಆಂಧ್ರ ಪ್ರದೇಶಕ್ಕೆ ಕರೆದೊಯ್ಯಲು ಕೇಳಿದ್ದ ಅನುಮತಿಯನ್ನು ಕೋರ್ಟ್ ನಿರಾಕರಿಸಿದೆ.
ಸುನೀಲ್ ನಾಯಕ್ ಪ್ರಸ್ತುತ ಬಿಹಾರದ ಅಗ್ನಿಶಾಮಕ ಸೇವೆಯ ಐಜಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೋಮವಾರ ಮುಂಜಾನೆ ಆಂಧ್ರ ಪ್ರದೇಶದ ಪೊಲೀಸರ ತಂಡವು ಶಾಸ್ತ್ರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಅವರ ನಿವಾಸದ ಮೇಲೆ ದಾಳಿ ಮಾಡಿತ್ತು.
ಸಂದೀಪ್ ನಾಯಕ್ ಆಂಧ್ರ ಪ್ರದೇಶದ ಸಿಐಡಿಯಲ್ಲಿದ್ದಾಗ ಸಂಸದರ ಬಂಧನವಾಗಿತ್ತು. ಅಲ್ಲದೇ ಅವರ ಸೂಚನೆಯ ಮೇರೆಗೆ ಬಂಧನ ನಡೆದಿತ್ತು ಮತ್ತು ಕಸ್ಟಡಿಯಲ್ಲಿದ್ದಾಗ ರಾಜು ಅವರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಲಾಗಿತ್ತು ಎಂಬ ಆರೋಪಗಳಿವೆ.
ಬಂಧನದ ಬಗ್ಗೆ ಸಂಸದರು ಸುನೀಲ್ ನಾಯಕ್ ವಿರುದ್ಧ ಕಸ್ಟಡಿಯಲ್ಲಿದ್ದಾಗ ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ನಾಯಕ್ ಅವರ ಮೇಲೆ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಸುನೀಲ್ ನಾಯಕ್ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಆಂಧ್ರ ಪ್ರದೇಶ ಪೊಲೀಸರು ಹಲವಾರು ಬಾರಿ ಸಮನ್ಸ್ ನೀಡಿದ್ದರೂ, ಅವರು ಅದಕ್ಕೆ ಸ್ಪಂದಿಸಿರಲಿಲ್ಲ ಎಂದು ಆರೋಪಿಸಲಾಗಿದೆ.

