ಬೆಂಗಳೂರು: ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಐಪಿಎಲ್ ಟಿಕೆಟ್ ಗಳನ್ನು ಮಾರಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆ.ಎಸ್.ಸಿ.ಎ.) ಸದಸ್ಯ ಎನ್ನಲಾದ ಗಣೇಶ್ ಹರಿಕೇಶ್ ಎಂಬುವರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಚಿನ್ನಸ್ವಾಮಿ ಸ್ಟೇಡಿಯಂ ಕ್ಯಾಂಟೀನ್ ನಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ್ ಎಂಬಾತನನ್ನು ಬಂಧಿಸಿದ್ದರು. ಆತ ನೀಡಿದ ಹೇಳಿಕೆ ಆಧರಿಸಿ ಗಣೇಶ ಹರಿಕೇಶ್ ಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿ ವಿಚಾರಣೆ ನಡೆಸಿದ್ದಾರೆ.
ಕಾಳಸಂತೆಯಲ್ಲಿ ಐಪಿಎಲ್ ಟಿಕೆಟ್ ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ ಪ್ರಕರಣದಲ್ಲಿ ಆರೋಪಿ ಚಂದ್ರಶೇಖರ್ ಬಂಧನದ ಬಳಿಕ ಆತನೊಂದಿಗೆ ಗಣೇಶ ಸಂಪರ್ಕ ಕಡಿತಗೊಳಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಿಸಿದ ಎಫ್ಐಆರ್ ನಲ್ಲಿ ಅವರ ಹೆಸರಿದ್ದು, ಅವರಿಗೆ ನೋಟಿಸ್ ನೀಡಿ ದಾಖಲೆ ಸಲ್ಲಿಸಲು ಸೂಚಿಸಲಾಗಿತ್ತು. ವಿಚಾರಣೆಗೆ ಹಾಜರಾದ ಅವರು ಎರಡು ದಿನ ಸಮಯಾವಕಾಶ ಕೋರಿದ್ದರು.
ನಂತರ ಅವರನ್ನು ಹೆಚ್ಚಿನ ತನಿಖೆ ನಡೆಸಿದಾಗ ಅವರು ಆನ್ಲೈನ್ ಕಂಪನಿಗಳ ಮೂಲಕ ದೊಡ್ಡ ಪ್ರಮಾಣದಲ್ಲಿ ಟಿಕೆಟ್ ಗಳನ್ನು ಖರೀದಿಸಿರುವುದು ಗೊತ್ತಾಗಿದೆ. ಕಂಪನಿಗಳ ಹೆಸರಲ್ಲಿ ಟಿಕೆಟ್ ಪಡೆಯುತ್ತಿದ್ದ ಗಣೇಶ್ ಅವುಗಳನ್ನು ಚಂದ್ರಶೇಖರ್ ಮೂಲಕ ಹೆಚ್ಚಿನ ಬೆಲೆಗೆ ಮಾರಾಟ ಮಾಡಿಸುತ್ತಿದ್ದರು ಎನ್ನಲಾಗಿದೆ.

