ನವದೆಹಲಿ-ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸಂಸ್ಥಾಪಕ ಮತ್ತು ಮಾಜಿ ಅಧ್ಯಕ್ಷ ಲಲಿತ್ ಮೋದಿ, ಬಾಗಿದ ತಲೆಯಿಂದಲ್ಲ, ಗೆಲುವಿನ ನಗೆಯೊಂದಿಗೆ ಭಾರತಕ್ಕೆ ಮರಳಲು ಸಜ್ಜಾಗಿದ್ದಾರೆ. 2009ರ ದಕ್ಷಿಣ ಆಫ್ರಿಕಾ ಐಪಿಎಲ್ ಆವೃತ್ತಿಗೆ ಸಂಬಂಧಿಸಿದ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಪ್ರಕರಣದಲ್ಲಿ ಮೇಲ್ಮನವಿ ನ್ಯಾಯಮಂಡಳಿಯಿಂದ (Appellate Tribunal) ದೊರೆತ ದೊಡ್ಡ ಮಟ್ಟದ ಪರಿಹಾರದ ಬೆನ್ನಲ್ಲೇ, ಬವಿಷ್ಯದ ಬಗ್ಗೆ ಮಹತ್ವದ ಸುಳಿವು ನೀಡಿರುವ ಅವರು, ದೀರ್ಘ 16 ವರ್ಷಗಳ ಬಳಿಕ ಮಾತೃಭೂಮಿಗೆ ವಾಪಸ್ಸಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ.
2010ರಿಂದ ಭಾರತದ ಹೊರಗೆ ವಾಸಿಸುತ್ತಿರುವ ಲಲಿತ್ ಮೋದಿ, ಜಾರಿ ನಿರ್ದೇಶನಾಲಯ (ED) ತಮ್ಮ ವಿರುದ್ಧ ಹೊರಿಸಿದ್ದ ಆರೋಪಗಳ ವಿರುದ್ಧ ದೀರ್ಘಕಾಲ ಕಾನೂನು ಸಮರ ನಡೆಸಿದ್ದರು.
ಜುಲೈ 16ರಂದು ಪ್ರಕಟವಾದ ಮೇಲ್ಮನವಿ ನ್ಯಾಯಮಂಡಳಿಯ ಮಹತ್ವದ ತೀರ್ಪು, ಈ ದೀರ್ಘ ಹೋರಾಟಕ್ಕೆ ಅಧಿಕೃತ ತೆರೆ ಎಳೆದಿದೆ.
”ನಾನು ಮಾಧ್ಯಮಗಳಿಗೆ ಮತ್ತು ಎಲ್ಲರಿಗೂ ಹೇಳುತ್ತಾ ಬಂದಿದ್ದ ವಿಷಯವೇ ಅಂತಿಮವಾಗಿ ಸತ್ಯವೆಂದು ಸಾಬೀತಾಗಿದೆ. ನ್ಯಾಯಮಂಡಳಿಯು ನನ್ನ ಪರವಾಗಿ ತೀರ್ಪು ನೀಡಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಐಪಿಎಲ್‌ನ ಹಿತಾಸಕ್ತಿಯ ಬಗ್ಗೆ ಮಾತ್ರವೇ ನಾನು ಕಾಳಜಿ ವಹಿಸಿದ್ದೆ,” ಎಂದು ಲಲಿತ್ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರಕರಣದ ಹಿನ್ನೆಲೆ ಮತ್ತು ತೀರ್ಪು
2009ರಲ್ಲಿ ಸಾರ್ವತ್ರಿಕ ಚುನಾವಣೆಗಳ ಕಾರಣದಿಂದ ಭಾರತದಿಂದ ದಕ್ಷಿಣ ಆಫ್ರಿಕಾಗೆ ಸ್ಥಳಾಂತರಗೊಂಡಿದ್ದ ಐಪಿಎಲ್ ಟೂರ್ನಿಗೆ ವಿದೇಶಿ ವಿನಿಮಯ ರವಾನಿಸಲು ಆರ್‌ಬಿಐ (RBI) ಪೂರ್ವಾನುಮತಿ ಪಡೆದಿಲ್ಲ ಎಂಬ ಆರೋಪವಿತ್ತು.
‘ಕಳ್ಳಸಾಗಣೆದಾರರು ಮತ್ತು ವಿದೇಶಿ ವಿನಿಮಯ ವಂಚಕರ (ಆಸ್ತಿ ಮುಟ್ಟುಗೋಲು) ಕಾಯ್ದೆ’ಯ (SAFEMA) ಅಡಿಯಲ್ಲಿ ಮೋದಿ ಹಾಗೂ ಇತರರ ವಿರುದ್ಧ ಇಡಿ (ED) ಹೊರಡಿಸಿದ್ದ ದಂಡದ ಆದೇಶಗಳು ಮತ್ತು ತೀರ್ಮಾನಗಳನ್ನು ನ್ಯಾಯಮಂಡಳಿ ರದ್ದುಗೊಳಿಸಿದೆ.
ದಕ್ಷಿಣ ಆಫ್ರಿಕಾದಲ್ಲಿ 2009ರ ಐಪಿಎಲ್ ಆಯೋಜನೆಗೆ ನಡೆದ ವಿದೇಶಿ ಹಣದ ವರ್ಗಾವಣೆಗಳು ‘ಬಂಡವಾಳ ಖಾತೆ ವಹಿವಾಟು’ಗಳಲ್ಲ, ಬದಲಾಗಿ ‘ಚಾಲ್ತಿ ಖಾತೆ ವಹಿವಾಟು’ಗಳಾಗಿವೆ ಎಂದು ನ್ಯಾಯಮಂಡಳಿ ಅಭಿಪ್ರಾಯಪಟ್ಟು, ಇಡಿಯ ಮೂಲ ಆಧಾರವನ್ನೇ ತಲೆಕೆಳಗಾಗಿಸಿದೆ. ಮೋದಿ FEMA ಉಲ್ಲಂಘನೆ ಮಾಡಿದ್ದರು ಎಂಬುದನ್ನು ಸಾಬೀತುಪಡಿಸಲು ಯಾವುದೇ ಆಧಾರಗಳಿಲ್ಲ ಎಂದೂ ಸ್ಪಷ್ಟಪಡಿಸಿದೆ.
ಕುಟುಂಬದ ಸಂತಸದೊಂದಿಗೆ ವಾಪಸಾತಿ ಯೋಜನೆ
ಕುಟುಂಬದ ಸಂತಸದ ಕ್ಷಣದೊಂದಿಗೆ ಭಾರತ ಪ್ರವೇಶಿಸಲು ಲಲಿತ್ ಮೋದಿ ಯೋಜನೆ ರೂಪಿಸಿದ್ದಾರೆ. ಈ ವರ್ಷದ ಅಕ್ಟೋಬರ್‌ನಲ್ಲಿ ತಮ್ಮ ಮಗಳಿಗೆ ಮಗುವಾಗಲಿದ್ದು (ಮೊಮ್ಮಗನ ಜನನ), ಮೊಮ್ಮಗನ ಆಗಮನದ ಬಳಿಕ ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಭಾರತಕ್ಕೆ ಮರಳುವ ನಿರೀಕ್ಷೆಯಿರುವುದಾಗಿ ಅವರು ತಿಳಿಸಿದ್ದಾರೆ.
ಬಿಸಿಸಿಐ (BCCI), ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯದ ಹಲವು ತನಿಖೆಗಳು ಮತ್ತು ಆರೋಪಗಳನ್ನು ಎದುರಿಸಿ 2010ರಲ್ಲಿ ಭಾರತ ತೊರೆಯಬೇಕಾಗಿ ಬಂದಿದ್ದ ಲಲಿತ್ ಮೋದಿ, ಇಂದು ಕಾನೂನಾತ್ಮಕವಾಗಿ ದೊಡ್ಡ ನಿರಾಳತೆ ಪಡೆದಿದ್ದಾರೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್ ಲೀಗ್‌ನ ಕನಸನ್ನು ಸಾಕಾರಗೊಳಿಸಿ, ಅದರ ಮೊದಲ ಆಯುಕ್ತರಾಗಿ ಮೆರೆದಿದ್ದ ಮೋದಿಯವರ ಈ ತತ್ ಕ್ಷಣದ ವಾಪಸಾತಿ ಸುದ್ದಿಯು ಭಾರತೀಯ ಕ್ರಿಕೆಟ್ ವಲಯದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದೆ. “ಆ ಅಧ್ಯಾಯ ಈಗ ಮುಗಿದಿದೆ, ನಾನು ನನ್ನ ಜೀವನದಲ್ಲಿ ಮುಂದೆ ಸಾಗಲಿದ್ದೇನೆ,” ಎಂದು ಮೋದಿ ತಿಳಿಸಿದ್ದು, ಅವರ ಮುಂದಿನ ಹೆಜ್ಜೆಗಳು ಯಾವ ದಿಕ್ಕಿನಲ್ಲಿರಲಿವೆ ಎಂಬ ಕುತೂಹಲ ಮೂಡಿಸಿದೆ.

