ನಿನ್ನೆ ( ಏಪ್ರಿಲ್ 12 ) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 20ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು 18 ರನ್‌ಗಳ ಅಂತರದಿಂದ ಸೋಲಿಸಿ ಗೆಲುವಿನ ಟ್ರ್ಯಾಕ್‌ಗೆ ಮರಳಿತು.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ವಿರಾಟ್ ಕೊಹ್ಲಿ, ರಜತ್ ಪಾಟಿದರ್ ಹಾಗೂ ಫಿಲ್ ಸಾಲ್ಟ್ ಅವರ ಭರ್ಜರಿ ಬ್ಯಾಟಿಂಗ್ ಬಲದಿಂದ ನಿಗದಿತ 20 ಓವರ್‌ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು 240 ರನ್ ಕಲೆಹಾಕಿತು. ಈ ಬೃಹತ್ ಮೊತ್ತ ಬೆನ್ನತ್ತುವಲ್ಲಿ ವಿಫಲವಾದ ಮುಂಬೈ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 222 ರನ್ ಗಳಿಸಲಷ್ಟೆ ಶಕ್ತವಾಯಿತು.
ಆರ್‌ಸಿಬಿ ಪರ ಕೊಹ್ಲಿ, ರಜತ್ ಹಾಗೂ ಫಿಲ್ ಸಾಲ್ಟ್ ಅರ್ಧಶತಕ ಬಾರಿಸಿ ತಂಡಕ್ಕೆ ಉತ್ತಮ ಕೊಡುಗೆ ನೀಡಿದರು. ವಿರಾಟ್ ಕೊಹ್ಲಿ 38 ಎಸೆತಗಳಲ್ಲಿ 50 ರನ್ ಬಾರಿಸಿ ಔಟ್ ಆದರು. ಹೀಗೆ ಪೆವಿಲಿಯನ್ ಸೇರಿದ ಕೊಹ್ಲಿ ನಂತರ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ವೇಳೆ ಫೀಲ್ಡಿಂಗ್‌ಗೆ ಇಳಿಯಲಿಲ್ಲ.
ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡಿ ಫೀಲ್ಡಿಂಗ್‌ಗೆ ಇಳಿಯದೇ ಇರುವುದು ಅತಿ ಅಪರೂಪದ ದೃಶ್ಯವಾಗಿದ್ದು, ಕೊಹ್ಲಿ ಏಕೆ ಕಣಕ್ಕಿಳಿಯಲಿಲ್ಲ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು. ಇದಕ್ಕೆ ಕಾರಣ ವಿರಾಟ್ ಕೊಹ್ಲಿಗೆ ಹಿಮ್ಮಡಿ ನೋವುಂಟಾದ ಕಾರಣ ವಿಶ್ರಾಂತಿ ತೆಗೆದುಕೊಂಡಿದ್ದಾರೆ. ಮುಂದಿನ ಪಂದ್ಯಕ್ಕೆ ಕೊಹ್ಲಿ ಚೇತರಿಸಿಕೊಂಡು ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ.

