ನಿನ್ನೆ ( ಏಪ್ರಿಲ್ 10 ) ಗುವಾಹಟಿಯ ಬರ್ಸಾಪರ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 16ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 6 ವಿಕೆಟ್‌ಗಳ ಗೆಲುವು ಸಾಧಿಸಿ ಟೂರ್ನಿಯಲ್ಲಿ ಸತತ ನಾಲ್ಕನೇ ಜಯ ಕಂಡಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರಂಭಿಕ ಆಘಾತ ಅನುಭವಿಸಿ ನಾಯಕ ರಜತ್ ಪಟಿದಾರ್ ಅರ್ಧಶತಕ, ಶೆಫರ್ಡ್ ಹಾಗೂ ವೆಂಕಟೇಶ್ ಐಯ್ಯರ್ ಉತ್ತಮ ಆಟದ ನೆರವಿನಿಂದ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 201 ರನ್ ಕಲೆಹಾಕಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 202 ರನ್‌ಗಳ ಸವಾಲಿನ ಗುರಿ ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾದ ರಾಜಸ್ಥಾನ್ ರಾಯಲ್ಸ್ ವೈಭವ್ ಸೂರ್ಯವಂಶಿ ಹಾಗೂ ಧ್ರುವ್ ಜುರೆಲ್ ಅರ್ಧಶತಕಗಳ ನೆರವಿನಿಂದ 18 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 202 ರನ್ ಕಲೆಹಾಕಿತು.
ಆರ್‌ಸಿಬಿ ನೀಡಿದ ಗುರಿಯನ್ನು ಬೆನ್ನಟ್ಟಲು ಮುಂದಾದ ರಾಜಸ್ಥಾನ್ ರಾಯಲ್ಸ್ ಪರ ಅನುಭವಿ ಆಟಗಾರರಾದ ಯಶಸ್ವಿ ಜೈಸ್ವಾಲ್, ಶಿಮ್ರಾನ್ ಹೆಟ್ಮಾಯೆರ್ ಹಾಗೂ ನಾಯಕ ರಿಯಾನ್ ಪರಾಗ್ ವಿಫಲರಾದರೆ 15 ವರ್ಷದ ಬಾಲಕ ವೈಭವ್ ಸೂರ್ಯವಂಶಿ ಭುವನೇಶ್ವರ್ ಕುಮಾರ್ ಹಾಗೂ ಜೋಶ್ ಹೇಜಲ್‌ವುಡ್ ರೀತಿಯ ವಿಶ್ವಶ್ರೇಷ್ಠ ಬೌಲರ್‌ಗಳಿಗೆ ಸಿಕ್ಸರ್ ಹಾಗೂ ಬೌಂಡರಿ ಚಚ್ಚಿ ಅಬ್ಬರಿಸಿದರು. 26 ಎಸೆತಗಳಲ್ಲಿ 8 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 78 ರನ್ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಹೀಗೆ ಪಂದ್ಯ ಗೆಲ್ಲುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ವೈಭವ್ ಸೂರ್ಯವಂಶಿ ಪಂದ್ಯದ ಬಳಿಕ ಮಾತನಾಡಿದ್ದು, ಎಲ್ಲ ಪಂದ್ಯದಲ್ಲೂ ತಾನು ಎಷ್ಟೇ ರನ್ ಗಳಿಸಿದರೂ ಔಟ್ ಆದಾಗ ತೀರ ಬೇಸರಕ್ಕೆ ಒಳಗಾಗುವುದೇಕೆ ಎಂಬುದನ್ನು ಬಿಚ್ಚಿಟ್ಟಿದ್ದಾರೆ. ಹೌದು, ವೈಭವ್ ದೊಡ್ಡ ಮೊತ್ತವನ್ನಾದರೂ ಗಳಿಸಿ ಔಟ್ ಆಗಲಿ ಅಥವಾ ಅಲ್ಪಮೊತ್ತಕ್ಕಾದರೂ ನಿರ್ಗಮಿಸಲಿ ಮೈದಾನದಲ್ಲೇ ಮುಖ ಸಪ್ಪೆ ಮಾಡಿಕೊಂಡು ಬೇಸರದಿಂದ ಹೊರನಡೆಯುತ್ತಾರೆ. ಈ ಕುರಿತು ನಿರೂಪಕ ಪ್ರಶ್ನೆಯನ್ನು ಹಾಕಿದ್ದು ಇದಕ್ಕೆ ವೈಭವ್ ‘ನಾನು ಇನ್ನೂ ಸ್ವಲ್ಪ ಹೊತ್ತು ಮೈದಾನದಲ್ಲಿದ್ದಿದ್ದರೆ ನನ್ನ ತಂಡ ಎರಡರಿಂದ ಮೂರು ಓವರ್ ಬೇಗ ಮೊತ್ತವನ್ನು ಚೇಸ್ ಮಾಡಬಹುದು ಅಥವಾ ಮೊದಲು ಬ್ಯಾಟಿಂಗ್ ಮಾಡಿದರೆ ಹತ್ತರಿಂದ ಇಪ್ಪತ್ತು ರನ್ ಹೆಚ್ಚು ಗಳಿಸಬಹುದು ಎಂಬುದು ನನ್ನ ಉದ್ದೇಶ. ಹಾಗಾಗಿ ಔಟ್ ಆದಾಗ ಆ ರೀತಿ ಬೇಸರಕ್ಕೊಳಗಾಗುತ್ತೇನೆ’ ಎಂದಿದ್ದಾರೆ.

