ಜೈಪುರದ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 36ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 5 ವಿಕೆಟ್‌ಗಳ ಭರ್ಜರಿ ಗೆಲುವನ್ನು ದಾಖಲಿಸಿದೆ.
ಇದೇ ಟೂರ್ನಿಯಲ್ಲಿ ನಡೆದಿದ್ದ 21ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 57 ರನ್‌ಗಳ ಗೆಲುವನ್ನು ಕಂಡಿದ್ದ ಸನ್ ರೈಸರ್ಸ್ ಹೈದರಾಬಾದ್ ಇದೀಗ ಎರಡನೇ ಬಾರಿಗೆ ಟೂರ್ನಿಯ ಆರಂಭದಲ್ಲಿ ಗೆಲುವಿನ ನಾಗಾಲೋಟ ನಡೆಸಿ ಬಲಿಷ್ಠ ತಂಡ ಎನಿಸಿಕೊಂಡಿದ್ದ ರಾಯಲ್ಸ್ ವಿರುದ್ಧ ಗೆದ್ದು ಬೀಗಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ವೈಭವ್ ಸೂರ್ಯವಂಶಿ ಶತಕದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 228 ರನ್ ಕಲೆಹಾಕಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ 229 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್ ಇಶಾನ್ ಕಿಶನ್ ಹಾಗೂ ಅಭಿಷೇಕ್ ಶರ್ಮಾ ಅರ್ಧಶತಕಗಳ ನೆರವಿನಿಂದ 18.3 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 229 ರನ್ ಕಲೆಹಾಕಿತು.
ರಾಜಸ್ಥಾನ್ ರಾಯಲ್ಸ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ 10 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಎರಡನೇ ವಿಕೆಟ್‌ಗೆ ಜತೆಯಾದ ವೈಭವ್ ಸೂರ್ಯವಂಶಿ ಹಾಗೂ ಧ್ರುವ್ ಜುರೆಲ್ 112 ರನ್‌ಗಳ ಜತೆಯಾಟವನ್ನಾಡಿದರು. ವೈಭವ್ ಸೂರ್ಯವಂಶಿ 37 ಎಸೆತಗಳಲ್ಲಿ 5 ಬೌಂಡರಿ ಹಾಗೂ 12 ಸಿಕ್ಸರ್ ಸಹಿತ 103 ರನ್ ಬಾರಿಸಿದರೆ, ಧ್ರುವ್ ಜುರೆಲ್ 35 ಎಸೆತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 51 ರನ್ ಬಾರಿಸಿದರು. ಇನ್ನುಳಿದಂತೆ ನಾಯಕ ರಿಯಾನ್ ಪರಾಗ್ 7, ಡೊನೊವನ್ ಫೆರೆರಿಯಾ 33, ಶಿಮ್ರಾನ್ ಹೆಟ್ಮಾಯೆರ್ 11, ರವೀಂದ್ರ ಜಡೇಜಾ ಅಜೇಯ 4 ಹಾಗೂ ಜೋಫ್ರಾ ಆರ್ಚರ್ ಅಜೇಯ 2 ರನ್ ಗಳಿಸಿದರು.
ಸನ್ ರೈಸರ್ಸ್ ಹೈದರಾಬಾದ್ ಪರ ಇಶಾನ್ ಮಲಿಂಗ ಎರಡು ವಿಕೆಟ್, ಪ್ರಫುಲ್ ಹಿಂಗೆ, ಪ್ಯಾಟ್ ಕಮಿನ್ಸ್, ಸಕಿಬ್ ಹುಸೈನ್ ಹಾಗೂ ನಿತಿಶ್ ಕುಮಾರ್ ರೆಡ್ಡಿ ತಲಾ ಒಂದೊಂದು ವಿಕೆಟ್ ಪಡೆದರು.
ಸನ್ ರೈಸರ್ಸ್ ಹೈದರಾಬಾದ್ ಇನ್ನಿಂಗ್ಸ್: ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದ ಟ್ರಾವಿಸ್ ಹೆಡ್ 6 ರನ್ ಗಳಿಸಿ ಬೇಗನೆ ಪೆವಿಲಿಯನ್ ಸೇರಿಕೊಂಡರು. ಎರಡನೇ ವಿಕೆಟ್‌ಗೆ ಜತೆಯಾದ ಅಭಿಷೇಕ್ ಶರ್ಮಾ ಹಾಗೂ ಇಶಾನ್ ಕಿಶನ್ 132 ರನ್‌ಗಳ ಜತೆಯಾಟವನ್ನಾಡಿದರು. ಅಭಿಷೇಕ್ ಶರ್ಮಾ 29 ಎಸೆತಗಳಲ್ಲಿ 11 ಹಾಗೂ 1 ಸಿಕ್ಸರ್ ಸಹಿತ 57 ರನ್ ದಾಖಲಿಸಿದರೆ, ಇಶಾನ್ ಕಿಶನ್ 31 ಎಸೆತಗಳಲ್ಲಿ 11 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 74 ರನ್ ಬಾರಿಸಿದರು. ಇನ್ನುಳಿದಂತೆ ಹೆನ್ರಿಚ್ ಕ್ಲಾಸೆನ್ 29, ನಿತಿಶ್ ಕುಮಾರ್ ರೆಡ್ಡಿ 36 (18), ಸಲೀಲ್ ಅರೋರಾ 8 ಹಾಗೂ ಅನಿಕೇತ್ ವರ್ಮಾ ಅಜೇಯ 1 ರನ್ ಗಳಿಸಿದರು.
ರಾಜಸ್ಥಾನ್ ರಾಯಲ್ಸ್ ಪರ ಜೋಫ್ರಾ ಆರ್ಚರ್ ಹಾಗೂ ಬ್ರಿಜೇಶ್ ಶರ್ಮಾ ತಲಾ ಎರಡು ವಿಕೆಟ್ ಪಡೆದರು.

