ಇಂದು ( ಮೇ 24 ) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಐಪಿಎಲ್ 2026ರ ಲೀಗ್ ಹಂತದ 69ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 30 ರನ್‌ಗಳ ಗೆಲುವನ್ನು ದಾಖಲಿಸುವ ಮೂಲಕ ಪ್ಲೇಆಫ್‌ಗೆ ಪ್ರವೇಶ ಪಡೆದುಕೊಂಡಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆರಿಸಿಕೊಂಡು ರಾಜಸ್ಥಾನ್ ರಾಯಲ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 205 ರನ್ ಕಲೆಹಾಕಿ ಮುಂಬೈ ಇಂಡಿಯನ್ಸ್ ತಂಡಕ್ಕೆ 206 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿದೆ.
ಈ ಮೂಲಕ 16 ಅಂಕಗಳನ್ನು ಪಡೆದ ರಾಜಸ್ಥಾನ್ ರಾಯಲ್ಸ್ ನೇರವಾಗಿ ಪ್ಲೇಆಫ್ ತಲುಪಿದ್ದು, 15 ಅಂಕದೊಂದಿಗೆ ಮುಂಬೈ ಗೆಲುವಿಗೆ ಕಾಯುತ್ತಾ ಪ್ಲೇಆಫ್ ಕನಸು ಕಾಣುತ್ತಿದ್ದ ಪಂಜಾಬ್ ಕಿಂಗ್ಸ್‌ಗೆ ಭಾರೀ ನಿರಾಸೆಯಾಗಿದೆ.
ರಾಜಸ್ಥಾನ್ ರಾಯಲ್ಸ್ ಇನ್ನಿಂಗ್ಸ್: ರಾಜಸ್ಥಾನ್ ರಾಯಲ್ಸ್ ಪರ ಯಶಸ್ವಿ ಜೈಸ್ವಾಲ್ 27 ರನ್ ಗಳಿಸಿದರೆ, ವೈಭವ್ ಸೂರ್ಯವಂಶಿ ಕೇವಲ 4 ರನ್ ಕಲೆಹಾಕಿದರು. ಇನ್ನುಳಿದಂತೆ ಧ್ರುವ್ ಜುರೆಲ್ 38, ರಿಯಾನ್ ಪರಾಗ್ 14, ದಾಸನ್ ಶನಕ 29, ಡೊನೊವನ್ ಫೆರೆರಾ 18, ಜೋಫ್ರಾ ಆರ್ಚರ್ 32, ಶುಭಮ್ ದುಬೆ 5, ರವೀಂದ್ರ ಜಡೇಜಾ ಅಜೇಯ 19 ಹಾಗೂ ನಾಂದ್ರೆ ಬರ್ಗರ್ ಅಜೇಯ 10 ರನ್ ಕಲೆಹಾಕಿದರು.
ಮುಂಬೈ ಇಂಡಿಯನ್ಸ್ ಪರ ದೀಪಕ್ ಚಹಲ್ ಹಾಗೂ ಶಾರ್ದೂಲ್ ಠಾಕೂರ್ ತಲಾ ಎರಡು ವಿಕೆಟ್ ಪಡೆದರೆ, ವಿಲ್ ಜಾಕ್ಸ್, ಎಎಂ ಘಜನ್ಫರ್ ಹಾಗೂ ಕಾರ್ಬಿನ್ ಬಾಷ್ ತಲಾ ಒಂದೊಂದು ವಿಕೆಟ್ ಪಡೆದರು.
ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್: ರಾಜಸ್ಥಾನ್ ರಾಯಲ್ಸ್ ನೀಡಿದ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಕೇವಲ 34 ರನ್‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡಿತು. ರೋಹಿತ್ ಶರ್ಮಾ ಡಕ್‌ಔಟ್ ಆದರೆ, ರಯಾನ್ ರಿಕೆಲ್ಟನ್ 12, ನಮನ್ ಧೀರ್ 6 ಹಾಗೂ ತಿಲಕ್ ವರ್ಮಾ 3 ರನ್ ಗಳಿಸಿದ್ದಾರೆ. ಹೀಗೆ 5.1 ಓವರ್‌ಗಳಲ್ಲಿ 38ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ಮುಂಬೈಗೆ ಸೂರ್ಯಕುಮಾರ್ ಯಾದವ್ ಹಾಗೂ ವಿಲ್ ಜಾಕ್ಸ್ 38 ಎಸೆತಗಳಲ್ಲಿ 63 ರನ್‌ಗಳ ಜತೆಯಾಟವನ್ನಾಡಿದರಾದರೂ ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾಗಲಿಲ್ಲ. ವಿಲ್ ಜಾಕ್ಸ್ 18 ಎಸೆತಗಳಲ್ಲಿ 33 ರನ್ ಬಾರಿಸಿದರೆ, ನಂತರ ಕಣಕ್ಕಿಳಿದ ನಾಯಕ ಹಾರ್ದಿಕ್ ಪಾಂಡ್ಯ ವೇಗವಾಗಿ 15 ಎಸೆತಗಳಲ್ಲಿ 34 ರನ್ ಬಾರಿಸಿ ಪೆವಿಲಿಯನ್ ಸೇರಿಕೊಂಡರು. ಬೆನ್ನಲ್ಲೇ ಕಾರ್ಬಿನ್ ಬಾಷ್ 2 ರನ್‌ಗೆ ನಿರ್ಗಮಿಸಿದರೆ, ಗೆಲುವಿಗಾಗಿ ಆಡಬೇಕಿದ್ದ ಸೂರ್ಯಕುಮಾರ್ ಯಾದವ್ 42 ಎಸೆತಗಳಲ್ಲಿ 60 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನುಳಿದಂತೆ ದೀಪಕ್ ಚಹರ್ 8, ಶಾರ್ದೂಲ್ ಠಾಕೂರ್ ಅಜೇಯ 10 ಹಾಗೂ ಘಜನ್ಫರ್ ಅಜೇಯ 2 ರನ್ ಗಳಿಸಿದರು.
ರಾಜಸ್ಥಾನ್ ರಾಯಲ್ಸ್ ಪರ ಜೋಫ್ರಾ ಆರ್ಚರ್ ಮೂರು ವಿಕೆಟ್, ನಾಂದ್ರೆ ಬರ್ಗರ್, ಬ್ರಿಜೇಶ್ ಶರ್ಮಾ ಹಾಗೂ ಯಶ್ ರಾಜ್ ಪೂಂಜಾ ತಲಾ ಎರಡು ವಿಕೆಟ್ ಪಡೆದರು.

