ಪ್ರಸ್ತುತ ನಡೆಯುತ್ತಿರುವ 2026ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ 23 ಪಂದ್ಯಗಳು ಮೊನ್ನೆ ( ಏಪ್ರಿಲ್ 14 ) ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಹಣಾಹಣಿಯ ಮೂಲಕ ಮುಕ್ತಯವಾಗಿವೆ.
ಈ ಸಂದರ್ಭದಲ್ಲಿ ಐದು ಬಾರಿ ಟ್ರೋಫಿ ಗೆದ್ದಿರುವ ಮುಂಬೈ ಇಂಡಿಯನ್ಸ್ ತಂಡ ನಾಲ್ಕು ಪಂದ್ಯಗಳನ್ನಾಡಿ ಕೇವಲ ಒಂದರಲ್ಲಿ ಗೆದ್ದು ಉಳಿದ ಮೂರು ಪಂದ್ಯಗಳಲ್ಲಿ ಸೋಲನುಭವಿಸುವ ಮೂಲಕ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಭಾನುವಾರ ( ಏಪ್ರಿಲ್ 12 ) ತವರು ಕ್ರೀಡಾಂಗಣ ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋತು ಮುಖಭಂಗಕ್ಕೊಳಗಾದ ಮುಂಬೈ ಇಂಡಿಯನ್ಸ್ ತಂಡ ಇಂದು ( ಏಪ್ರಿಲ್ 16 ) ಪಂಜಾಬ್ ಕಿಂಗ್ಸ್ ವಿರುದ್ಧ ಕಣಕ್ಕಿಳಿಯಲಿದ್ದು, ಇದಕ್ಕೂ ಮುನ್ನ ಪ್ರಮುಖ ಆಟಗಾರನ ಲಭ್ಯತೆ ಕುರಿತು ಕಹಿ ಸುದ್ದಿಯೊಂದು ಎದುರಾಗಿದೆ.
ಹೌದು, ಆರ್‌ಸಿಬಿ ವಿರುದ್ಧದ ಪಂದ್ಯದ ವೇಳೆ ಆರಂಭಿಕನಾಗಿ ಕಣಕ್ಕಿಳಿದಿದ್ದ ರೋಹಿತ್ ಶರ್ಮಾ 19 ರನ್‌ಗೆ ರಿಟೈರ್ಡ್ ಹರ್ಟ್ ಆಗಿ ಪೆವಿಲಿಯನ್‌ನತ್ತ ಸಾಗಿದ್ದರು. ಹೀಗೆ ಪಂದ್ಯದ ಮಧ್ಯದಲ್ಲಿಯೇ ತೆರಳಿದ ರೋಹಿತ್ ಶರ್ಮಾ ಮಂಡಿರಜ್ಜು ಗಾಯಕ್ಕೊಳಗಾಗಿದ್ದು, ಇಂದಿನ ಪಂದ್ಯ ಹಾಗೂ ಮುಂದಿನ ಪಂದ್ಯವೊಂದಕ್ಕೆ ಅಲಭ್ಯರಾಗಿದ್ದಾರೆ ಎನ್ನಲಾಗಿದೆ.

