ಇಂದು ( ಮೇ 31 ) ಅಹ್ಮದಾಬಾದ್ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ 2026ಕ್ಕೆ ತೆರೆ ಬೀಳಲಿದೆ.
ಈ ಬಾರಿಯ ಟೂರ್ನಿಯಲ್ಲಿ ಒಂದನೇ ಕ್ವಾಲಿಫಯರ್ ಆಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳೇ ಈ ಪಂದ್ಯದಲ್ಲೂ ಮುಖಾಮುಖಿಯಾಗಲಿದ್ದು, ಸಂಜೆ 7ಕ್ಕೆ ಟಾಸ್ ಹಾಗೂ 7.30ಕ್ಕೆ ಪಂದ್ಯ ಆರಂಭವಾಗಲಿದೆ.
ಇನ್ನು ಈ ಪಂದ್ಯದಲ್ಲಿ ಗೆಲ್ಲಲಿರುವ ತಂಡ ಎರಡನೇ ಬಾರಿಗೆ ಚಾಂಪಿಯನ್ ಆಗಲಿದ್ದು, ಉಭಯ ತಂಡಗಳು ಎರಡನೇ ಬಾರಿಗೆ ಟ್ರೋಫಿ ಎತ್ತಿಹಿಡಿಯುವತ್ತ ಚಿತ್ತ ನೆಟ್ಟಿವೆ.
ಕ್ವಾಲಿಫಯರ್ ಒಂದರಲ್ಲಿ ಗುಜರಾತ್ ಸೋಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಪಂದ್ಯದಲ್ಲೂ ಗುಜರಾತ್ ತಂಡವನ್ನು ಮಣಿಸಲಿದೆಯಾ ಅಥವಾ ಗುಜರಾತ್ ಎರಡನೇ ಕ್ವಾಲಿಫಯರ್ ಪಂದ್ಯದ ರೀತಿ ಆಡಿ ರಾಯಲ್ ಚಾಲೆಂಜರ್ಸ್ಗೆ ಚಾಲೆಂಜ್ ಮಾಡಲಿದೆಯಾ ಎಂಬ ಪ್ರಶ್ನೆ ಎದ್ದಿದೆ.
ಜತೆಗೆ ಈ ಪಂದ್ಯ ಮಳೆಯಿಂದ ರದ್ದಾದರೆ ಮೀಸಲು ದಿನ ಇದೆಯಾ ಎಂಬ ಕುರಿತು ಚರ್ಚೆಗಳು ನಡೆಯುತ್ತಿದ್ದು, ಖಂಡಿತವಾಗಿಯೂ ಫೈನಲ್ ಪಂದ್ಯವಾದ ಕಾರಣ ಈ ಪಂದ್ಯಕ್ಕೆ ಒಂದು ದಿನ ಮೀಸಲು ದಿನವಿದೆ. ಮಳೆಯಿಂದ ಪಂದ್ಯ ರದ್ದಾದರೆ ನಾಳೆ ಪಂದ್ಯ ಮುಂದುವರಿಯಲಿದೆ.
ಆದರೆ ಹವಾಮಾನ ವರದಿಯ ಪ್ರಕಾರ ಅಹ್ಮದಾಬಾದ್ನಲ್ಲಿ ಇಂದು ಮಳೆಯಾಗುವ ಸಾಧ್ಯತೆ ಇಲ್ಲ. ಅಲ್ಲದೇ ಜನಪ್ರಿಯ ಅಕ್ಯುವೆದರ್ ವೆಬ್ಸೈಟ್ ಪ್ರಕಾರವೂ ಸಹ ಇಂದು ಮಳೆಯಾಗುವುದಿಲ್ಲ ಎನ್ನಲಾಗಿದ್ದು, ಮೋಡ ಕವಿದ ವಾತಾವರಣವಿರಲಿದೆಯಂತೆ. ಹೀಗಾಗಿ ಪಂದ್ಯಕ್ಕೆ ಮಳೆ ಅಡ್ಡಿಯನ್ನುಂಟುಮಾಡುವುದಿಲ್ಲ ಎನ್ನಬಹುದಾಗಿದೆ.

