ನಿನ್ನೆ ( ಏಪ್ರಿಲ್ 22 ) ಲಕ್ನೋದ ಏಕನ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 32ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 40 ರನ್‌ಗಳ ಗೆಲುವನ್ನು ದಾಖಲಿಸಿತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 159 ರನ್ ಕಲೆಹಾಕಿ ಲಕ್ನೋ ಸೂಪರ್ ಜೈಂಟ್ಸ್‌ಗೆ 160 ರನ್‌ಗಳ ಸಾಧಾರಣ ಗುರಿಯನ್ನು ನೀಡಿತು. ಈ ಗುರಿಯನ್ನೂ ಸಹ ಬೆನ್ನಟ್ಟಲಾಗದ ಲಕ್ನೋ ಸೂಪರ್ ಜೈಂಟ್ಸ್ 18 ಓವರ್‌ಗಳಲ್ಲಿ 119 ರನ್‌ಗೆ ಆಲ್‌ಔಟ್ ಆಯಿತು.
ರಾಜಸ್ಥಾನ್ ರಾಯಲ್ಸ್ ಈ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದು, ಎರಡನೇ ಸ್ಥಾನದಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೂರನೇ ಸ್ಥಾನಕ್ಕೆ ಹಾಗೂ ಮೂರನೇ ಸ್ಥಾನದಲ್ಲಿದ್ದ ಸನ್ ರೈಸರ್ಸ್ ಹೈದರಾಬಾದ್ ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡಿದೆ.
ಆರು ಪಂದ್ಯಗಳನ್ನಾಡಿ ಐದರಲ್ಲಿ ಗೆದ್ದು ಉಳಿದೊಂದು ಪಂದ್ಯ ಡ್ರಾ ಆದ ಕಾರಣ ಪಂಜಾಬ್ ಕಿಂಗ್ಸ್ 11 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.
ಏಳು ಪಂದ್ಯಗಳನ್ನಾಡಿ ಐದರಲ್ಲಿ ಗೆದ್ದು ಎರಡರಲ್ಲಿ ಸೋತು 10 ಅಂಕ ಹೊಂದಿರುವ ರಾಜಸ್ಥಾನ್ ರಾಯಲ್ಸ್ ಎರಡನೇ ಸ್ಥಾನದಲ್ಲಿದೆ.
ಆರು ಪಂದ್ಯಗಳನ್ನಾಡಿ ನಾಲ್ಕರಲ್ಲಿ ಗೆದ್ದು ಉಳಿದೆರಡು ಪಂದ್ಯಗಳಲ್ಲಿ ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು 8 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
ಏಳು ಪಂದ್ಯಗಳನ್ನಾಡಿ ನಾಲ್ಕರಲ್ಲಿ ಗೆದ್ದು ಉಳಿದ ಮೂರು ಪಂದ್ಯಗಳಲ್ಲಿ ಸೋತು 8 ಅಂಕಗಳನ್ನು ಹೊಂದಿರುವ ಸನ್ ರೈಸರ್ಸ್ ಹೈದರಾಬಾದ್ ನಾಲ್ಕನೇ ಸ್ಥಾನದಲ್ಲಿದೆ.

