ಬೆಂಗಳೂರಿನ ಎಂ ಚಿನ್ನಸ್ವಾಮಿಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2026ರ ಲೀಗ್ ಹಂತದ 11ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಿದ್ದು, ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಅಬ್ಬರಿಸಿ ಬೊಬ್ಬಿರಿದಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 250 ರನ್ ಕಲೆಹಾಕಿ ಚೆನ್ಮೈ ಸೂಪರ್ ಕಿಂಗ್ಸ್ ತಂಡಕ್ಕೆ 251 ರನ್‌ಗಳ ಗುರಿಯನ್ನು ನೀಡಿದೆ.
ಆರ್‌ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಮೊದಲ ಎರಡು ಓವರ್ ಯಾವುದೇ ಬೌಂಡರಿ ಬಾರಿಸಲಾಗದೇ ಪರದಾಡಿದರಾದರೂ ನಂತರ ಒಳ್ಳೆಯ ರನ್ ಕಲೆಹಾಕಿ ಸಮಾಧಾನಕರ ಆರಂಭ ಕಟ್ಟಿಕೊಟ್ಟರು. ಕೊಹ್ಲಿ 28 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಫಿಲ್ ಸಾಲ್ಟ್ 46 ರನ್ ಬಾರಿಸಿದರು. ಬಳಿಕ ಅಬ್ಬರಿಸಿದ ದೇವದತ್ ಪಡಿಕ್ಕಲ್ 29 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 50 ರನ್ ಚಚ್ಚಿದರು. ಪಡಿಕ್ಕಲ್ ವಿಕೆಟ್ ಬಿದ್ದ ಬಳಿಕ ಜತೆಯಾದ ನಾಯಕ ರಜತ್ ಪಟಿದಾರ್ ಹಾಗೂ ಟಿಮ್ ಡೇವಿಡ್ ಜೋಡಿ 35 ಎಸೆತಗಳಲ್ಲಿ 99 ರನ್ ಚಚ್ಚಿ ಸಿಕ್ಸರ್‌ಗಳ ಸುರಿಮಳೆ ಸುರಿಸಿದರು. ರಜತ್ ಪಟಿದಾರ್ 19 ಎಸೆತಗಳಲ್ಲಿ 1 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ ಅಜೇಯ 48 ರನ್ ಬಾರಿಸಿ ಅಬ್ಬರಿಸಿದರೆ, ಟಿಮ್ ಡೇವಿಡ್ ಮೊದಲ ಆರು ಎಸೆತಗಳಲ್ಲಿ ನಿಧಾನಗತಿಯ ಆಟವನ್ನಾಡಿ ಬಳಿಕ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ 25 ಎಸೆತಗಳಲ್ಲಿ 3 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ ಅಜೇಯ 70 ರನ್ ಬಾರಿಸಿದರು.
ಆರ್‌ಸಿಬಿ ರೌದ್ರನರ್ತನಕ್ಕೆ ಕಂಗಾಲಾದ ಚೆನ್ನೈ ಸೂಪರ್ ಕಿಂಗ್ಸ್ ಪರ ಅನ್ಶುಲ್ ಕಾಂಬೋಜ್, ಜೇಮಿ ಓವರ್‌ಟನ್ ಹಾಗೂ ಶಿವಮ್ ದುಬೆ ತಲಾ ಒಂದೊಂದು ವಿಕೆಟ್ ಪಡೆದರು.

