ಸದ್ಯ ಧರಂಶಾಲಾ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಐಪಿಎಲ್ 2026ರ ಕ್ವಾಲಿಫಯರ್ ಪಂದ್ಯ ನಡೆಯುತ್ತಿದ್ದು, ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ದಾಖಲೆಯ ಮೊತ್ತ ಕಲೆಹಾಕಿ ಗುಜರಾತ್ ಟೈಟನ್ಸ್‌ಗೆ ಕಠಿಣ ಗುರಿಯನ್ನು ನೀಡಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟನ್ಸ್ ಬೌಲಿಂಗ್ ಆರಿಸಿಕೊಂಡು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 254 ರನ್ ಕಲೆಹಾಕಿ ಗುಜರಾತ್ ಟೈಟನ್ಸ್‌ಗೆ 255 ರನ್‌ಗಳ ಗುರಿಯನ್ನು ನೀಡಿದೆ.
ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಇತಿಹಾಸದಲ್ಲೇ ಯಾವ ತಂಡವೂ ಮಾಡಿರದ ದಾಖಲೆಯನ್ನು ಬರೆದಿದ್ದು, ಈ ಪಂದ್ಯದಲ್ಲಿ ತನ್ನ ಎದುರಾಳಿಯಾಗಿರುವ ಗುಜರಾತ್ ಟೈಟನ್ಸ್ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದುಹಾಕಿದೆ.
ಈ ಹಿಂದೆ ಗುಜರಾತ್ ಟೈಟನ್ಸ್ 2023ರ ಐಪಿಎಲ್‌ನಲ್ಲಿ ಎರಡನೇ ಕ್ವಾಲಿಫಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 3 ವಿಕೆಟ್ ನಷ್ಟಕ್ಕೆ 233 ರನ್ ಕಲೆಹಾಕಿತ್ತು. ಇದು ಇಂದಿನ ಪಂದ್ಯದ ಮೊದಲ ಇನ್ನಿಂಗ್ಸ್‌ವರೆಗೂ ಐಪಿಎಲ್ ಇತಿಹಾಸದಲ್ಲಿ ಕ್ವಾಲಿಫಯರ್ ಪಂದ್ಯದಲ್ಲಿ ದಾಖಲಾದ ಅಧಿಕ ರನ್ ಆಗಿತ್ತು.
ಇನ್ನು 2025ರ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 5 ವಿಕೆಟ್‌ಗೆ 228 ರನ್ ದಾಖಲಿಸಿದ್ದು ಐಪಿಎಲ್ ಇತಿಹಾಸದಲ್ಲಿ ಪ್ಲೇಆಫ್‌ನಲ್ಲಿ ದಾಖಲಾದ ಮೂರನೇ ಅಧಿಕ ರನ್ ಆಗಿದೆ.

