ಇದೇ 28ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಉದ್ಘಾಟನಾ ಪಂದ್ಯದ ಮೂಲಕ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಚಾಲನೆ ದೊರೆಯಲಿದೆ.
ಎಲ್ಲ ತಂಡಗಳು ತಮ್ಮ ತಮ್ಮ ಹೋಮ್ ಪಿಚ್ ತಲುಪಿ ಟೂರ್ನಿಗಾಗಿ ಮೈದಾನಕ್ಕಿಳಿದು ಅಭ್ಯಾಸ ಆರಂಭಿಸಿದ್ದು, ತಮ್ಮ ತಂಡಗಳಲ್ಲೇ ಎರಡು ಉಪ ತಂಡಗಳನ್ನು ರಚಿಸಿಕೊಂಡು ಅಭ್ಯಾಸ ಪಂದ್ಯಗಳನ್ನೂ ಸಹ ಆಡುತ್ತಿವೆ. ಹಾಗೆಯೇ ಚಿನ್ನಸ್ವಾಮಿ ಅಂಗಳದಲ್ಲಿ ಬೀಡು ಬಿಟ್ಟಿರುವ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಹ ಅಭ್ಯಾಸ ಪಂದ್ಯವನ್ನಾಡಿದ್ದು, ಮೊದಲ ಅಭ್ಯಾಸ ಪಂದ್ಯದ ಮಾಹಿತಿ ಹೊರಬಿದ್ದಿದೆ.
ವೆಂಕಟೇಶ್ ಐಯ್ಯರ್ ಹಾಗೂ ಕೃನಾಲ್ ಪಾಂಡ್ಯ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ರನ್ ಹೊಳೆಯೇ ಹರಿದಿದೆ. ಹೌದು, ನಿಗದಿತ 20 ಓವರ್‌ಗಳ ಅಭ್ಯಾಸ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಂಕಟೇಶ್ ಐಯ್ಯರ್ ತಂಡ 7 ವಿಕೆಟ್ ನಷ್ಟಕ್ಕೆ 234 ರನ್ ಕಲೆಹಾಕಿತು. ತಂಡದ ಪರ ಜಿತೇಶ್ ಶರ್ಮಾ 37 ಎಸೆತಗಳಲ್ಲಿ 81 ರನ್ ಚಚ್ಚಿದರೆ, ಟಿಮ್ ಡೇವಿಡ್ 14 ಎಸೆತಗಳಲ್ಲಿ 36 ರನ್, ವೆಂಕಟೇಶ್ ಐಯ್ಯರ್ 16 ಎಸೆತಗಳಲ್ಲಿ 30 ರನ್ ಹಾಗೂ ವಿರಾಟ್ ಕೊಹ್ಲಿ 12 ಎಸೆತಗಳಲ್ಲಿ 29 ರನ್ ಬಾರಿಸಿದರು.
ಅತ್ತ ಕೃನಾಲ್ ಪಾಂಡ್ಯ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 247 ರನ್ ಬಾರಿಸುವ ಮೂಲಕ ಗೆಲುವನ್ನು ಕಂಡಿತು. ತಂಡದ ಪರ ದೇವದತ್ ಪಡಿಕ್ಕಲ್ 33 ಎಸೆತಕ್ಕೆ 63 ರನ್ ಬಾರಿಸಿದರೆ, ಕೃನಾಲ್ ಪಾಂಡ್ಯ 33 ಎಸೆತಗಳಲ್ಲಿ 53 ಹಾಗೂ ರಜತ್ ಪಟಿದಾರ್ 25 ಎಸೆತಗಳಲ್ಲಿ 74 ರನ್ ಬಾರಿಸಿದರು.

