ನಿನ್ನೆ ( ಏಪ್ರಿಲ್ 28 ) ಮುಲ್ಲಾನ್‌ಪುರದ ಮಹಾರಾಜ ಯದವೀಂದ್ರ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 40ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 6 ವಿಕೆಟ್‌ಗಳ ಗೆಲುವನ್ನು ದಾಖಲಿಸಿತು.
ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 222 ರನ್ ಕಲೆಹಾಕಿದ್ದ ಪಂಜಾಬ್ ಕಿಂಗ್ಸ್ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 223 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ 19.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 228 ರನ್ ಬಾರಿಸಿತು.
ಈ ಮೂಲಕ ಈ ಬಾರಿಯ ಆವೃತ್ತಿಯಲ್ಲಿ ಇದೇ ಮೊದಲ ಬಾರಿಗೆ ಪಂಜಾಬ್ ಕಿಂಗ್ಸ್ ಸೋಲಿನ ರುಚಿಯನ್ನು ಕಂಡಿತು.
ಇನ್ನು ಈ ಪಂದ್ಯದ ಮೊದಲ ಇನ್ನಿಂಗ್ಸ್‌ನ ಎರಡನೇ ಓವರ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಬೌಲರ್ ನಾಂದ್ರೆ ಬರ್ಗರ್ ಎಸೆದ ಎಸೆತಕ್ಕೆ ಪಂಜಾಬ್ ಕಿಂಗ್ಸ್ ಬ್ಯಾಟ್ಸ್‌ಮನ್ ಪ್ರಿಯನ್ಶ್ ಆರ್ಯ ಸಿಕ್ಸರ್ ಚಚ್ಚಿದ್ದರು. ಸಿಕ್ಸರ್ ಅಬ್ಬರಕ್ಕೆ ಚೆಂಡು ವೀಕ್ಷಕರು ಕುಳಿತಿದ್ದ ಸ್ಟ್ಯಾಂಡ್‌ಗೆ ಹೋಗಿಬಿದ್ದಿತ್ತು. ಈ ವೇಳೆ ಪಂದ್ಯ ವೀಕ್ಷಿಸಲು ಬಂದಿದ್ದ ವೃದ್ಧರೊಬ್ಬರ ಮುಖಕ್ಕೆ ಆ ಚೆಂಡು ಬಡಿದಿದ್ದು, ಮೂಗು ಮತ್ತು ಹಣೆಯ ಮಧ್ಯಭಾಗದಿಂದ ರಕ್ತ ಹರಿದುಬಂದಿದೆ. ಈ ವಿಡಿಯೊವನ್ನು ಅಲ್ಲಿಯೇ ಇದ್ದ ಇತರೆ ವೀಕ್ಷಕರು ಸೆರೆ ಹಿಡಿದು ಹಂಚಿಕೊಂಡಿದ್ದು, ಆ ವೃದ್ಧ ಚೇತರಿಸಿಕೊಳ್ಳಲಿ ಎಂದು ಕ್ರಿಕೆಟ್ ಪ್ರಿಯರು ಕಾಮೆಂಟ್ ಮಾಡಿದ್ದಾರೆ.

