ಡೆಲ್ಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 35ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಬರೋಬ್ಬರಿ 265 ರನ್ ಚೇಸ್ ಮಾಡಿ 6 ವಿಕೆಟ್‌ಗಳ ಗೆಲುವನ್ನು ದಾಖಲಿಸಿದೆ.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಕೆಎಲ್ ರಾಹುಲ್ ಅಬ್ಬರದ ಅರ್ಧಶತಕ ಹಾಗೂ ನಿತಿಶ್ ರಾಣಾ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 264 ರನ್ ಕಲೆಹಾಕಿ ಪಂಜಾಬ್ ಕಿಂಗ್ಸ್ ತಂಡಕ್ಕೆ 265 ರನ್ ಗಳ ಬೃಹತ್ ಗುರಿ ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ 18.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 265 ರನ್ ಬಾರಿಸಿತು.
ಈ ಚೇಸ್ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತಿಹೆಚ್ಚು ಮೊತ್ತ ಎಂಬ ತಮ್ಮದೇ ಹಳೆಯ ದಾಖಲೆ ಮುರಿದ ಪಂಜಾಬ್ ಕಿಂಗ್ಸ್ ನೂತನ ದಾಖಲೆ ಬರೆಯಿತು. ಈ ಹಿಂದೆ 2024ರ ಐಪಿಎಲ್‌ನಲ್ಲಿ ಕೆಕೆಆರ್ ವಿರುದ್ಧ 262 ರನ್ ಚೇಸ್ ಮಾಡಿದ್ದ ಪಂಜಾಬ್ ಕಿಂಗ್ಸ್ ಈ ದಾಖಲೆಯನ್ನು ನಿರ್ಮಿಸಿತ್ತು.
ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್: ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದ ಪತುಮ್ ನಿಸ್ಸಾಂಕ 11 ರನ್ ಗಳಿಸಿ ಔಟ್ ಆದರೆ ಎರಡನೇ ವಿಕೆಟ್ ಗೆ ಜತೆಯಾದ ಕೆಎಲ್ ರಾಹುಲ್ ಹಾಗೂ ನಿತಿಶ್ ರಾಣಾ 95 ಎಸೆತಗಳಲ್ಲಿ 220 ರನ್ ಗಳ ಜತೆಯಾಟವಾಡುವ ಮೂಲಕ ಅಬ್ಬರಿಸಿ ಪಂಜಾಬ್ ಬೌಲರ್ಸ್ ಕಂಗಾಲಾಗುವ ಹಾಗೆ ಮಾಡಿದರು. ನಿತಿಶ್ ರಾಣಾ 44 ಎಸೆತಗಳಲ್ಲಿ 91 ರನ್ ಗಳಿಸಿದರೆ, ಕೆಎಲ್ ರಾಹುಲ್ 67 ಎಸೆತಗಳಲ್ಲಿ 16 ಬೌಂಡರಿ ಹಾಗೂ 9 ಸಿಕ್ಸರ್ ಸಹಿತ ಅಜೇಯ 152 ರನ್ ಚಚ್ಚಿದರು. ಡೇವಿಡ್ ಮಿಲ್ಲರ್ ಅಜೇಯ 3 ರನ್ ಕಲೆಹಾಕಿದರು.
ಪಂಜಾಬ್ ಕಿಂಗ್ಸ್ ಪರ ಅರ್ಷ್ ದೀಪ್ ಸಿಂಗ್ ಹಾಗೂ ಕ್ಷೇವಿಯರ್ ಬಾರ್ಟ್ಲೆಟ್ ತಲಾ ಒಂದೊಂದು ವಿಕೆಟ್ ಪಡೆದರು.
ಪಂಜಾಬ್ ಕಿಂಗ್ಸ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಪ್ರಿಯನ್ಶ್ ಆರ್ಯ ಹಾಗೂ ಪ್ರಭ್‌ಸಿಮ್ರಾನ್ ಸಿಂಗ್ ಪವರ್‌ಪ್ಲೇನಲ್ಲಿ ಅಬ್ಬರಿಸಿ ಬೃಹತ್ ಮೊತ್ತ ಬೆನ್ನಟ್ಟಲು ಬೇಕಾದ ಆರಂಭವನ್ನು ಕಟ್ಟಿಕೊಟ್ಟರು. ಪ್ರಭ್‌ಸಿಮ್ರಾನ್ ಸಿಂಗ್ 26 ಎಸೆತಗಳಲ್ಲಿ 9 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 76 ರನ್ ಬಾರಿಸಿದರೆ, ಪ್ರಿಯನ್ಶ್ ಆರ್ಯ 17 ಎಸೆತಗಳಲ್ಲಿ 2 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 43 ರನ್ ಬಾರಿಸಿದರು. ಇನ್ನುಳಿದಂತೆ ಕೂಪರ್ ಕೊನೊಲಿ 17, ನೇಹಲ್ ವಧೇರಾ 25, ಶಶಾಂಕ್ ಸಿಂಗ್ ಅಜೇಯ 19 ಹಾಗೂ ಎರಡು ಜೀವದಾನ ಪಡೆದ ಶ್ರೇಯಸ್ ಐಯ್ಯರ್ 36 ಎಸೆತಗಳಲ್ಲಿ 3 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ ಅಜೇಯ 71 ರನ್ ಬಾರಿಸಿದರು.
ಡೆಲ್ಲಿ ಕ್ಯಾಪಿಟಲ್ಸ್ ಪರ ಕುಲ್‌ದೀಪ್ ಯಾದವ್ ಎರಡು ವಿಕೆಟ್, ಅಕ್ಷರ್ ಪಟೇಲ್ ಹಾಗೂ ವಿಪ್ರಾಜ್ ನಿಗಮ್ ತಲಾ ಒಂದೊಂದು ವಿಕೆಟ್ ಪಡೆದರು.

