ನಿನ್ನೆ ( ಏಪ್ರಿಲ್ 29 ) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 41ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸನ್ ರೈಸರ್ಸ ಹೈದರಾಬಾದ್ 6 ವಿಕೆಟ್‌ಗಳ ಗೆಲುವನ್ನು ದಾಖಲಿಸಿತು.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ರಯಾನ್ ರಿಕೆಲ್ಟನ್ ಅಬ್ಬರದ ಶತಕದ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 243 ರನ್ ಕಲೆಹಾಕಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ 244 ರನ್‌ಗಳ ಕಠಿಣ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಿ ಬೌಂಡರಿಗಳ ಸುರಿಮಳೆಗೈದ ಸನ್ ರೈಸರ್ಸ್ ಹೈದರಾಬಾದ್ 18.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 249 ರನ್ ಚಚ್ಚಿತು.
ಹೀಗೆ ಈ ಬಾರಿಯ ಟೂರ್ನಿಯಲ್ಲಿ ತವರಿನಲ್ಲೇ ನಾಲ್ಕನೇ ಪಂದ್ಯ ಸೋತ ಮುಂಬೈ ಇಂಡಿಯನ್ಸ್ ಒಟ್ಟು ಆರನೇ ಬಾರಿಗೆ ಸೋತು ಪ್ಲೇಆಫ್ ಪ್ರವೇಶಿಸುವುದು ಅತಿ ಕಷ್ಟದ ಕೆಲಸ ಎಂಬ ಘಟ್ಟಕ್ಕೆ ಬಂದು ನಿಂತಿದೆ.
ಐದು ಬಾರಿ ಟ್ರೋಫಿ ಗೆದ್ದು ಮೆರೆದ ತಮ್ಮ ನೆಚ್ಚಿನ ತಂಡ ಎಂಥ ಹೀನಾಯ ಪರಿಸ್ಥಿತಿ ಎದುರಿಸುತ್ತಿದೆ ಎಂದು ಕೆಲ ಅಭಿಮಾನಿಗಳು ಬೇಸರ ಹೊರಹಾಕಿದರು. ಅತ್ತ ಪಂದ್ಯ ವೀಕ್ಷಿಸಲು ಮೈದಾನಕ್ಕೆ ಹೋಗಿದ್ದ ಮಾಲೀಕರಾದ ನೀತಾ ಅಂಬಾನಿ ಕಣ್ಣೀರಿಟ್ಟಿದ್ದಾರೆ ಹಾಗೂ ಪಕ್ಕದಲ್ಲಿದ್ದ ಆಕಾಶ್ ಅಂಬಾನಿ ಸಹ ಸಪ್ಪೆ ಮುಖ ಹೊತ್ತು ಕುಳಿತಿದ್ದರು.
ಇದೇ ಸಮಯಕ್ಕೆ ಕೆಲ ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳು ತಮ್ಮದೇ ನೆಚ್ಚಿನ ತಂಡದ ಸೋಲನ್ನು ಸಂಭ್ರಮಿಸಿದ್ದಾರೆ. ಹೌದು, ರೋಹಿತ್ ಶರ್ಮಾ ಅಭಿಮಾನಿಗಳು ಎಕ್ಸ್ ವೇದಿಕೆಯಲ್ಲಿ ಮುಂಬೈ ಇಂಡಿಯನ್ಸ್ ಸೋಲಿನ ಕುರಿತು ಬರೆದುಕೊಂಡಿದ್ದು, ಕರ್ಮ ನಿಮ್ಮನ್ನು ಬಿಡಲ್ಲ ನಿಮಗೆ ಇದು ಆಗಬೇಕಿದ್ದೇ, ಇನ್ನೂ ಆಗಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.
ರೋಹಿತ್ ಅಭಿಮಾನಿಗಳು ಈ ಮಟ್ಟಕ್ಕೆ ಆಕ್ರೋಶ ಹೊರಹಾಕಲು ಕಾರಣ ಮುಂಬೈ ಇಂಡಿಯನ್ಸ್ ಹಾರ್ದಿಕ್ ಪಾಂಡ್ಯಗಾಗಿ ತಮ್ಮ ನೆಚ್ಚಿನ ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕೆಳಗಿಳಿಸಿದ್ದು. ಹೌದು, ಗುಜರಾತ್ ಟೈಟನ್ಸ್ ತಂಡದಿಂದ ಮುಂಬೈ ಇಂಡಿಯನ್ಸ್‌ಗೆ ಹಾರ್ದಿಕ್ ಪಾಂಡ್ಯ ಬರುವಾಗ ನಾಯಕತ್ವಕ್ಕೆ ಬೇಡಿಕೆ ಇಟ್ಟಿದ್ದರು. ಇದೇ ಕಾರಣಕ್ಕೆ ಐದು ಟ್ರೋಫಿ ಗೆಲ್ಲಿಸಿಕೊಟ್ಟಿದ್ದ ಮಾಸ್ಟರ್‌ಮೈಂಡ್ ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕೈಬಿಟ್ಟಿದ್ದರು.
ಹೀಗೆ ತಮ್ಮ ನೆಚ್ಚಿನ ಆಟಗಾರನಿಗೆ ಅವಮಾನಿಸಿದ ನಿಮಗೆ ಅಂದು ಶುರುವಾದ ಕರ್ಮ ಇನ್ನೂ ಮುಂದುವರಿಯುತ್ತಿದೆ ಎಂದು ಕಾಲೆಳೆದಿದ್ದಾರೆ.

