ನಿನ್ನೆ ( ಏಪ್ರಿಲ್ 8 ) ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ನ 14ನೇ ಲೀಗ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೇವಲ 1 ರನ್ ಅಂತರದ ರೋಚಕ ಗೆಲುವನ್ನು ಸಾಧಿಸಿತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 210 ರನ್ ಕಲೆಹಾಕಿ ಡೆಲ್ಲಿ ಕ್ಯಾಪಿಟಲ್ಸ್‌ಗೆ 211 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಲು ಯತ್ನಿಸಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 209 ರನ್ ಕಲೆಹಾಕಿತು.
ಕೊನೆಯ ಎರಡು ಎಸೆತಗಳಲ್ಲಿ ಎರಡು ರನ್ ಬೇಕಿದ್ದಾಗ ಎರಡೂ ಎಸೆತಗಳಲ್ಲೂ ರನ್ ಬಾರಿಸಲಾಗದ ಕಾರಣ ಡೆಲ್ಲಿ ಪಂದ್ಯವನ್ನು ಡ್ರಾ ಕೂಡ ಮಾಡಿಕೊಳ್ಳಲಾಗದೇ ಎಡವಟ್ಟು ಮಾಡಿಕೊಂಡಿತು. ಕೊನೆಯ ಹಂತದಲ್ಲಿ ಅಬ್ಬರಿಸಿ ತಂಡವನ್ನು ಗೆಲುವಿನ ಹೊಸ್ತಿಲಿಗೆ ತಂದಿಟ್ಟಿದ್ದ ಮಿಲ್ಲರ್ ಕೊನೆಯ ಓವರ್‌ನ ಐದನೇ ಎಸೆತದಲ್ಲಿ ಯಾವುದೇ ರನ್ ಓಡದೇ ಇದ್ದದ್ದು ಪಂದ್ಯ ಡ್ರಾ ಮಾಡಿಕೊಳ್ಳಲು ಇದ್ದ ಅವಕಾಶವನ್ನು ಕೈತಪ್ಪಿಸಿತು.
ಹೀಗಾಗಿ ಮಿಲ್ಲರ್ ವಿರುದ್ಧ ಕೆಲ ಟೀಕೆಗಳು ವ್ಯಕ್ತವಾಗುತ್ತಿವೆ. ಒಂದೆಡೆ ಮಿಲ್ಲರ್ ವಿರುದ್ಧ ಮಾತುಗಳು ಕೇಳಿಬರುತ್ತಿದ್ದರೆ ಮತ್ತೊಂದೆಡೆ ಸೋಲಿಗೆ ಕಾರಣವಾದ ಒಂದು ರನ್ ಮುಂಚೆಯೇ ಬಂದಿತ್ತು. ಆದರೆ ಬಿಸಿಸಿಐನ ನಿಯಮದಿಂದಾಗಿ ಆ ರನ್ ಲೆಕ್ಕಕ್ಕೆ ಬಾರದ ಕಾರಣ ಡೆಲ್ಲಿ ಸೋಲನ್ನು ಕಂಡಿತು ಎಂದು ಕೆಲ ನೆಟ್ಟಿಗರು ವಾದಿಸುತ್ತಿದ್ದಾರೆ.
ಹೌದು, ರಶೀದ್ ಖಾನ್ ಎಸೆದ ಹತ್ತನೇ ಓವರ್‌ನ ಎರಡನೇ ಎಸೆತಕ್ಕೆ ನಿತಿಶ್ ರಾನಾ ಶಾಟ್ ಬಾರಿಸುವ ಯತ್ನ ಮಾಡಿದರು. ಆದರೆ ಚೆಂಡು ಕಾಲಿಗೆ ಬಡಿದಿತ್ತು. ನಿತಿಶ್ ರಾಣಾ ಹಾಗೂ ಕೆಎಲ್ ರಾಹುಲ್ ಒಂದು ರನ್ ಓಡಿದರು. ಅಷ್ಟರಲ್ಲಿ ಅಂಪೈರ್ ಎಲ್‌ಬಿಡಬ್ಲ್ಯೂಗೆ ಮಾಡಿದ ಮನವಿಗೆ ಪ್ರತಿಕ್ರಿಯಿಸಿ ಔಟ್ ಕೊಟ್ಟಿದ್ದರು. ಅಂಪೈರ್ ತೀರ್ಮಾನ ಪ್ರಶ್ನಿಸಿ ರಾಣಾ ರಿವ್ಯೂ ಸಲ್ಲಿಸಿದರು. ಮೂರನೇ ಅಂಪೈರ್ ಪರಿಶೀಲಿಸಿದಾಗ ಚೆಂಡು ಕಾಲಿಗೆ ಬಡಿಯುವ ಮುನ್ನ ತುಸು ಬ್ಯಾಟ್‌ಗೆ ತಾಗಿದ್ದು ಕಂಡುಬಂದು ಅದನ್ನು ನಾಟ್‌ಔಟ್ ಎಂದು ತೀರ್ಪು ನೀಡಿದರು.
ಆದರೆ ಬಿಸಿಸಿಐನ ನಿಯಮದ ಪ್ರಕಾರ ಆ ರನ್ ಲೆಕ್ಕಕ್ಕೆ ಬಾರಲಿಲ್ಲ. ರನ್ ಓಡಿದ್ದರೂ ಸಹ ಅದನ್ನೂ ಡಾಟ್ ಬಾಲ್ ಎಂದು ಪರಿಗಣಿಸಲಾಯಿತು.
ಸದ್ಯ ಈ ನಿಯಮದ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದು, ಇದ್ಯಾವ ನ್ಯಾಯ ಕೂಡಲೇ ಬಿಸಿಸಿಐ ಈ ನಿಯಮವನ್ನು ಸರಿಪಡಿಸಿ ಎಲ್‌ಬಿಡಬ್ಲ್ಯೂ ರಿವ್ಯೂ ಬ್ಯಾಟ್ಸ್‌ಮನ್ ಪರ ಬಂದರೆ ಆತ ಎಷ್ಟು ರನ್ ಗಳಸಿರುತ್ತಾನೋ ಅಷ್ಟು ರನ್‌ಗಳನ್ನು ನ್ಯಾಯಯುತವಾಗಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

