ಇದೇ ಮಾರ್ಚ್ 28ರಿಂದ ಬಹುನಿರೀಕ್ಷಿತ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ.
ಹೀಗೆ ಬೃಹತ್ ಟೂರ್ನಿ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ತಂಡಗಳು ತಮ್ಮ ಹೊಸ ಜರ್ಸಿಗಳನ್ನು ಅನಾವರಣಗೊಳಿಸುವಲ್ಲಿ ನಿರತಗೊಂಡಿವೆ. ಅದೇ ರೀತಿ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ತನ್ನ ನೂತನ ಜರ್ಸಿ ಅನಾವರಣಗೊಳಿಸಲು ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಹಲವಾರು ಬಾರಿ ಹಿಗ್ಗಾ ಮುಗ್ಗಾ ಟ್ರೋಲ್ ಮಾಡಿದೆ.
3 ಸ್ಟಾರ್ ಕಾಮಿಡಿ ಕ್ಲಬ್
ಈ ವಿಡಿಯೋದ ಆರಂಭದಲ್ಲಿ ಸ್ಟ್ಯಾಂಡಪ್ ಕಾಮಿಡಿ ವೇದಿಕೆಯೊಂದನ್ನು ತೋರಿಸಿರುವ ಕೆಕೆಆರ್ 3 ಸ್ಟಾರ್ ಕಾಮಿಡಿ ಕ್ಲಬ್ ಎಂದು ಇಲ್ಲಿ ಬಳಸಿದೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪುರುಷರು ಕೇವಲ ಒಂದು ಬಾರಿ ಮಾತ್ರ ಕಪ್ ಗೆದ್ದಿದ್ದು, ಜರ್ಸಿ ಮೇಲೆ ಮೂರು ಸ್ಟಾರ್ ಹಾಕಿಕೊಳ್ಳಬೇಕು ಎಂದರೆ ವನಿತೆಯರ 2 ಟ್ರೋಫಿಗಳನ್ನು ಸಹ ಸೇರಿಸಿಕೊಳ್ಳಬೇಕಿದೆ ಎಂದು ಪರೋಕ್ಷವಾಗಿ ವ್ಯಂಗ್ಯವಾಡಿದೆ.
49ಕ್ಕೆ ಆಲ್ಔಟ್
2017ರ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದೇ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕೇವಲ 49 ರನ್ ಗಳಿಗೆ ಆಲ್ ಔಟ್ ಆಗಿತ್ತು. ಇದು ಇಂದಿಗೂ ಸಹ ಐಪಿಎಲ್ ಇತಿಹಾಸದಲ್ಲಿ ದಾಖಲಾದ ಅತಿ ಕಡಿಮೆ ತಂಡದ ಮೊತ್ತವಾಗಿದೆ. ಇದನ್ನೇ ಈ ವಿಡಿಯೋದಲ್ಲಿ ಟ್ರಾಫಿಕ್ ಸಿಗ್ನಲ್ ಕೌಂಟ್ ಡೌನ್ ನಲ್ಲಿ ಬಳಸಿರುವ ಕೆಕೆಆರ್ ಆರ್ಸಿಬಿಯನ್ನು ಮತ್ತೊಮ್ಮೆ ಟ್ರೋಲ್ ಮಾಡಿದೆ.
ಟೇಕ್ 158
ಇನ್ನು ಈ ವಿಡಿಯೋದಲ್ಲಿ ನಿರ್ದೇಶಕರು ಟೇಕ್ 158 ಎಂದು ಬರೆದಿರುವ ಬೋರ್ಡ್ ಬಳಸಿರುವ ದೃಶ್ಯವಿದೆ. ಇದರಲ್ಲಿಯೂ ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಹೀನಾಯವಾಗಿ ಟ್ರೋಲ್ ಮಾಡಲಾಗಿದೆ. ಹೌದು, 2008ರಲ್ಲಿ ನಡೆದ ಐತಿಹಾಸಿಕ ಚೊಚ್ಚಲ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಬ್ರೆಂಡನ್ ಮೆಕ್ಕಲಂ ಅಜೇಯ 158 ರನ್ ಚಚ್ಚಿದ್ದರು. ಇದನ್ನು ಬಳಸಿ ಕೆಕೆಆರ್ ಇದೀಗ ಆರ್‌ಸಿಬಿ ಕಾಲೆಳೆದಿದೆ.
ಪವರ್ ಪ್ಲೇಯಲ್ಲಿ 105ಕ್ಕೆ 0
ವಿಡಿಯೋನ ಮತ್ತೊಂದು ದೃಶ್ಯದಲ್ಲಿ 105/0, 6 ಓವರ್ಸ್, 5 ಸಿಕ್ಸಸ್ ಎಂದು ಬರೆಯಲಾಗಿದೆ. ಈ ಮೊತ್ತವನ್ನು ಸಹ ಕೊಲ್ಕತ್ತಾ ನೈಟ್ ರೈಡರ್ಸ್ 2017ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕಲೆಹಾಕಿತ್ತು. ಇದು ಐಪಿಎಲ್ ಇತಿಹಾಸದಲ್ಲಿ ಕೆಕೆಆರ್ ಪವರ್ ಪ್ಲೇ ನಲ್ಲಿ ದಾಖಲಿಸಿದ ಅತಿ ಹೆಚ್ಚು ಮೊತ್ತವಾಗಿದೆ.

