ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯದ ಹಂತಕ್ಕೆ ಬಂದು ತಲುಪಿದ್ದು, ಕೊನೆಯ ಎರಡು ಪಂದ್ಯಗಳು ಮಾತ್ರ ಬಾಕಿ ಉಳಿದಿವೆ.
ಇಂದು ( ಮೇ 29 ) ಮುಲ್ಲಾನ್‌ಪುರದ ಮಹಾರಾಜ ಯದವೀಂದ್ರ ಸಿಂಗ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಕ್ವಾಲಿಫಯರ್ ಪಂದ್ಯದಲ್ಲಿ ಒಂದನೇ ಕ್ವಾಲಿಫಯರ್ ಸೋತ ಗುಜರಾತ್ ಟೈಟನ್ಸ್ ಹಾಗೂ ಎಲಿಮಿನೇಟರ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಮೇ 31ರ ಭಾನುವಾರದಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಇಂದು ಗೆಲ್ಲುವ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಎದುರಿಸಲಿದೆ.
ಹೀಗೆ ಈ ಬಾರಿ ಹಾಲಿ ಚಾಂಪಿಯನ್ಸ್ ವಿರುದ್ಧ ಫೈನಲ್ ಪಂದ್ಯದಲ್ಲಿ ಯಾವ ತಂಡ ಕಣಕ್ಕಿಳಿಯಲಿದೆ ಹಾಗೂ ಯಾವ ತಂಡ ಚಾಂಪಿಯನ್ ಆಗಬಹುದು ಎಂಬ ಕುತೂಹಲದ ನಡುವೆಯೇ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದ ತಂಡಗಳ ಒಳಗೆ ರಿಪೇರಿ ಕೆಲಸ ಆರಂಭವಾಗಿದೆ.
ಅದರಲ್ಲೂ ಐದು ಬಾರಿ ಚಾಂಪಿಯನ್ ಆದ ಇತಿಹಾಸವಿರುವ ಮುಂಬೈ ಇಂಡಿಯನ್ಸ್ ತಂಡ ಈ ಬಾರಿ ಒಂಬತ್ತನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ತಾನು ನೀಡಿದ ಪ್ರದರ್ಶನದ ಕುರಿತು ಸಭೆ ನಡೆಸಿದ್ದು ಈ ಸಭೆಯಲ್ಲಿ ಹಾರ್ದಿಕ್ ಪಾಂಡ್ಯರನ್ನು ನಾಯಕತ್ವದಿಂದ ಕೈಬಿಡಬೇಕು ಎಂಬ ಮಾತು ಕೇಳಿಬಂದಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಕೇವಲ ನಾಯಕನ ಸ್ಥಾನದಿಂದ ಮಾತ್ರವಲ್ಲದೇ ತಂಡದ ಆಟಗಾರನನ್ನಾಗಿಯೂ ಸಹ ಪಾಂಡ್ಯರನ್ನು ತಂಡದಲ್ಲಿ ಇರಿಸಿಕೊಳ್ಳಲು ಮುಂಬೈ ಇಚ್ಛಿಸುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದ್ದು, ಪಾಂಡ್ಯರನ್ನು ಟ್ರೇಡ್ ಮಾಡಲಿದೆಯಾ ಅಥವಾ ತಂಡದಿಂದ ಕೈಬಿಡಲಿದೆಯಾ ಎಂಬ ಪ್ರಶ್ನೆ ಎದ್ದಿದೆ.
ಅತ್ತ ಪಾಂಡ್ಯ ಸಹ ಈ ಸುದ್ದಿಗಳಿಗೆ ತಕ್ಕ ಹಾಗೆ ಪ್ರತಿಕ್ರಿಯಿಸುತ್ತಿದ್ದು, ಇತ್ತೀಚೆಗಷ್ಟೆ ಟೂರ್ನಿ ಮುಗಿಯುತ್ತಿದ್ದಂತೆ ತಮ್ಮ ಇನ್ಸ್ಟಾಗ್ರಾಮ್ ಖಾತೆ ನಿಷ್ಕ್ರಿಯಗೊಳಿಸಿದ್ದರು. ಅಲ್ಲದೇ ಟೂರ್ನಿಯ ಕೊನೆಯ ಪಂದ್ಯದ ವೇಳೆ ಪೆವಿಲಿಯನ್ ಬಾಗಿಲ ಬಳಿ ನಿಂತಿದ್ದ ಪಾಂಡ್ಯರನ್ನು ಕಂಡು ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳು ಕಿರುಚಾಡುತ್ತಿದ್ದು, ಇದನ್ನು ಕಂಡ ಪಾಂಡ್ಯ ಕೋಪದಿಂದ ತನ್ನ ಟಿ ಶರ್ಟ್ ಕಿತ್ತು ಅಭಿಮಾನಿಗಳಿಗೆ ಎಸೆದು ಕ್ಷಣವೂ ಅಲ್ಲಿ ನಿಲ್ಲದೇ ನಡೆದಿದ್ದಾರೆ.
ಇದು ಅಭಿಮಾನಿಗಳಿಗೆ ಪ್ರೀತಿಯಿಂದ ಜೆರ್ಸಿ ನೀಡಿದ ಹಾಗೆ ಕಾಣಲಿಲ್ಲ. ಬದಲಾಗಿ ಕೋಪದಿಂದ ನಿಮ್ಮ ತಂಡದ ಸಹವಾಸವೇ ಬೇಡ ಎಂದು ಬೇಸತ್ತು ಜೆರ್ಡಿ ಕಿತ್ತೆಸೆದು ಹೋದ ಹಾಗಿದೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.
ಇನ್ನು ಪಾಂಡ್ಯ ಈ ಬಾರಿ ಪಂದ್ಯಕ್ಕಾಗಿ ತಲೆ ಕೆಡಿಸಿಕೊಂಡದ್ದಕ್ಕಿಂತ ಹೆಚ್ಚಾಗಿ ತನ್ನ ಹೊಸ ಗರ್ಲ್‌ಫ್ರೆಂಡ್ ಮಹೀಕಾ ಬಗ್ಗೆ ಸಮಯ ಕೊಟ್ಟಿದ್ದೇ ಹೆಚ್ಚು ಎಂಬುದು ಪ್ರತಿಯೊಬ್ಬರ ವಾದವಾಗಿದ್ದು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳೂ ಸಹ ಹರಿದಾಡಿದ್ದವು.

