ನಿನ್ನೆ ( ಮೇ 21 ) ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 89 ರನ್‌ಗಳಿಂದ ಗೆದ್ದ ಗುಜರಾತ್ ಟೈಟನ್ಸ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದ್ದು, ಒಂದನೇ ಕ್ವಾಲಿಫಯರ್ ಆಡುವ ನಿರೀಕ್ಷೆಯನ್ನು ಹೆಚ್ಚಿಸಿಕೊಂಡಿದೆ. ಇನ್ನು ಈ ಸೋಲಿನ ಮೂಲಕ ಪ್ಲೇಆಫ್ ಪ್ರವೇಶಿಸಲು ಇದ್ದ ಕೊನೆಯ ಅವಕಾಶವನ್ನು ಕೈಚೆಲ್ಲಿದ ಚೆನ್ನೈ ಟೂರ್ನಿಯಿಂದ ಹೊರಬಿದ್ದಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಗುಜರಾತ್ ಟೈಟನ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಗುಜರಾತ್ ಸಾಯಿ ಸುದರ್ಶನ್, ಶುಬ್‌ಮನ್ ಗಿಲ್ ಹಾಗೂ ಜೋಶ್ ಬಟ್ಲರ್ ಈ ತ್ರಿಮೂರ್ತಿಗಳ ಅಬ್ಬರದ ಅರ್ಧಶತಕಗಳ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 229 ರನ್ ಬಾರಿಸಿ ಚೆನ್ನೈ ಸೂಪರ್ ಕಿಂಗ್ಸ್‌ಗೆ 230 ರನ್‌ಗಳ ಕಠಿಣ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಚೆನ್ನೈ ಸೂಪರ್ ಕಿಂಗ್ಸ್ 13.4 ಓವರ್‌ಗಳಲ್ಲಿ 140 ರನ್‌ಗಳಿಗೆ ಆಲ್‌ಔಟ್ ಆಯಿತು.
ಗುಜರಾತ್ ಟೈಟನ್ಸ್ ಇನ್ನಿಂಗ್ಸ್: ತಂಡದ ಪರ ಸಾಯಿ ಸುದರ್ಶನ್ 53 ಎಸೆತಗಳಲ್ಲಿ 84, ಶುಬ್‌ಮನ್ ಗಿಲ್ 37 ಎಸೆತಗಳಲ್ಲಿ 64, ರಾಹುಲ್ ತೆವಾಟಿಯಾ ಡಕ್‌ಔಟ್, ವಾಷಿಂಗ್ಟನ್ ಸುಂದರ್ 7 ಹಾಗೂ ಜೋಶ್ ಬಟ್ಲರ್ 27 ಎಸೆತಗಳಲ್ಲಿ ಅಜೇಯ 57 ರನ್ ಚಚ್ಚಿದರು.
ಚೆನ್ನೈ ಸೂಪರ್ ಕಿಂಗ್ಸ್ ಪರ ಮುಕೇಶ್ ಚೌಧರಿ, ಸ್ಪೆನ್ಸರ್ ಜಾನ್ಸೆನ್ ಹಾಗೂ ಅನ್ಶುಲ್ ಕಾಂಬೋಜ್ ತಲಾ ಒಂದೊಂದು ವಿಕೆಟ್ ಪಡೆದರು.
ಚೆನ್ನೈ ಸೂಪರ್ ಕಿಂಗ್ಸ್ ಇನ್ನಿಂಗ್ಸ್: ತಂಡದ ಪರ ಯಾವೊಬ್ಬ ಆಟಗಾರನೂ ದಿಟ್ಟ ಆಟವನ್ನಾಡಲಿಲ್ಲ. ಸಂಜು ಸ್ಯಾಮ್ಸನ್ ಡಕ್‌ಔಟ್ ಆದರೆ, ಮ್ಯಾಥ್ಯೂ ಶಾರ್ಟ್ 14, ರುತುರಾಜ್ ಗಾಯಕ್ವಾಡ್ 16, ಉರ್ವಿಲ್ ಪಟೇಲ್ ಡಕ್‌ಔಟ್, ಕಾರ್ತಿಕ್ ಶರ್ಮಾ 19, ಡಿವಾಲ್ಡ್ ಬ್ರೆವಿಸ್ 8, ಶಿವಮ್ ದುಬೆ 17 ಎಸೆತಗಳಲ್ಲಿ 47, ಅನ್ಶುಲ್ ಕಾಂಬೋಜ್ 19, ನೂರ್ ಅಹ್ಮದ್ 1, ಸ್ಪೆನ್ಸರ್ ಜಾನ್ಸನ್ ಡಕ್‌ಔಟ್ ಹಾಗೂ ಮುಕೇಶ್ ಚೌಧರಿ ಅಜೇಯ 2 ರನ್ ಗಳಿಸಿದರು.
ಗುಜರಾತ್ ಟೈಟನ್ಸ್ ಪರ ಮೊಹಮ್ಮದ್ ಸಿರಾಜ್, ಕಗಿಸೊ ರಬಾಡಾ ಹಾಗೂ ರಶೀದ್ ಖಾನ್ ತಲಾ ಮೂರು ವಿಕೆಟ್ ಪಡೆದರು.

